ಕೂಡ್ಲಿಗಿ(ವಿಜಯನಗರ):
ಹಿಂದಿನ ಸರ್ಕಾರದ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ಮುಖ್ಯಮಂತ್ರಿ ಸರ್ವ ಸ್ವತಂತ್ರರು. ಆದರೆ, ಹಿಂದಿನ ಅಕ್ರಮಗಳ ಬಗ್ಗೆ ಅವರಿಗೆ ಗೊತ್ತಿದ್ದರೆ, ಇಷ್ಟು ದಿನ ಯಾಕೆ ಸುಮ್ಮನಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದರು.
ಬಳ್ಳಾರಿಗೆ ತೆರಳುವ ಮಾರ್ಗ ಮಧ್ಯೆ ಕೂಡ್ಲಿಗಿ ಪಟ್ಟಣದಲ್ಲಿ ಶನಿವಾರ ಹೊಸದಿಗಂತ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಭಾಗಿಯಾಗಿದ್ದ ಬಿ.ನಾಗೇಂದ್ರ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ನಿಗಮದ ಹಣ ಅಕ್ರಮವಾಗಿ ಲೋಕಸಭೆ ಚುನಾವಣೆಗೆ ಬಳಕೆಯಾಗಿದೆ ಎಂದು ಇಡಿ ಹೇಳುತ್ತಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ರಾಜ್ಯದ ಜನತೆ ಕೇಳುತ್ತಿದೆ ಎಂದರು.
ಹಿಂದಿನ ಬಿಜೆಪಿ ಅಥವಾ ಇನ್ಯಾವುದೇ ಸರ್ಕಾದಲ್ಲಿ ಆಗಿರುವ ಹಗರಣಗಳ ತನಿಖೆ ಬೇಡವೆಂದು ನಾವು ಹೇಳುತ್ತಿಲ್ಲ. ಮೊದಲು ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ನಂತರ ಬರುವ ಮುಖ್ಯಮಂತ್ರಿ ತನಿಖೆ ನಡೆಸಲಿ. ಹಿಂದಿನ ಅವಧಿಯ ತನಿಖೆ ಹೆಸರಲ್ಲಿ ವಿಪಕ್ಷದ ವಿರುದ್ಧ ಗದಾಪ್ರಹಾರ ನಡೆಸಿದರೆ ನಾವು ಹೆದರುವುದಿಲ್ಲ. ಓಡಿ ಹೋಗುವುದೂ ಇಲ್ಲವೆಂದು ಲೇವಡಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್, ಪ್ರಮುಖರಾದ ಸೂರ್ಯ ಪಾಪಣ್ಣ, ಗುಳಗಿ ವೀರೇಂದ್ರ ಕುಮಾರ್, ಬಣವಿಕಲ್ಲು ನಾಗರಾಜ್ ಮತ್ತಿತರರು ಇದ್ದರು.