ಹೊಸದಿಗಂತ ವರದಿ ಹಾವೇರಿ:
ಶಿಗ್ಗಾಂವ ತಾಲೂಕಿನ ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ಘಟಿಕೋತ್ಸವದ ವೇದಿಕೆಗೆ ತಮ್ಮನ್ನು ಆಹ್ವಾನಿಸಿಲ್ಲ, ನಾನೂ ಬಂದರೂ ಯಾರೂ ಬಂದು ಸ್ವಾಗತಿಸಲಿಲ್ಲ ಎಂದು ಕ್ಯಾತೆ ತೆಗೆದ ನೂತನ ಶಾಸಕ ಯಾಸೀರ್ ಖಾನ್ ಪಠಾಣ ವಿವಿ ಸಿಬ್ಬಂದಿ ಮೇಲೆ ದರ್ಪ ತೋರಿದ ಘಟನೆ ಸೋಮವಾರ ನಡೆಯಿತು.
ಜಾನಪದ ವಿವಿ ಆವರಣದಲ್ಲಿ ಜಾನಪದ ಶೈಲಿಯಲ್ಲಿ ಮೆರವಣಿ ಆರಂಭವಾಯಿತು. ಮೆರವಣಿಕೆಯಲ್ಲಿ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ ಅವರು ಪಾಲ್ಲೊಂಡಿದ್ದರು. ಮೆರವಣಿಗೆ ವೇದಿಕೆಯತ್ತ ಸಾಗುತ್ತಿದ್ದಾಗ ಸ್ಥಳಕ್ಕೆ ಶಾಸಕ ಯಾಸೀರ್ ಖಾನ್ ಪಠಾಣ ಆಗಮಿಸಿದರು.
ಮುಂದೆ ಹೋಗಿ ಸಚಿವರನ್ನು ಭೇಟಿಯಾಗಿ ಬಳಿಕ ಹಿಂದೆ ಬಂದ ಶಾಸಕರು ಬೆಂಬಲಿಗರೊಂದಿಗೆ ಗುಂಪು ಸೇರಿ ಘಟಿಕೋತ್ಸವದ ವೇದಿಕೆ ಮುಂದೆ ಆಗಮಿಸಿ, ನನ್ನನ್ನು ವೇದಿಕೆ ಕರೆದಿಲ್ಲಾ, ನಾನು ವಿವಿಗೆ ಬಂದರೂ ಯಾರೂ ಸ್ವಾಗತಿಸಲಿಲ್ಲ, ನಿಮಗೆ ಮುಂದೆ ಇದೆ, ಯುನಿವರ್ಸಿಟಿಯವರು ಇಲ್ಲಿ ಬಾಳ್ವೆ ಮಾಡಿ ನೋಡ್ತಿನಿ ಎಂದು ಆವಾಜ್ ಹಾಕಿದರು. ಅಲ್ಲದೇ ಅವರ ಬೆಂಬಲಿಗರು ನಮ್ಮ ಶಾಸಕರ ಹೆಸರನ್ನು ಕಾರ್ಡ್ ನಲ್ಲಿ ಹಾಕಿಲ್ಲ ಎಂದು ವಿವಿ ವಿರುದ್ಧ ಧಿಕ್ಕಾರ ಕೂಗಿದರು. ಆಗ ವಿವಿಯ ಸಿಬ್ಬಂದಿಯನ್ನು ಎಳೆದಾಡಿದ ಶಾಸಕ ಬೆಂಬಲಿಗರು ದರ್ಪ ತೋರಿದ್ದಾರೆ. ಇದನೆಲ್ಲಾ ನೋಡುತ್ತಿದ್ದ ವಿದ್ಯಾರ್ಥಿಗಳು, ಸಭಿಕರು ಏನಿದು ಶಾಸಕರಿಗೆ ಘಟಿಕೋತ್ಸವದ ಕನಿಷ್ಟ ಶಿಷ್ಟಾಚಾರದ ಅರವೂ ಇದ್ದಂತಿಲ್ಲ ಎಂದು ಮತನಾಡುತ್ತಿದ್ದುದು ಕಂಡು ಬಂತು.