Wednesday, January 14, 2026
Wednesday, January 14, 2026
spot_img

ಒಂದೇ ಕಡೆ ಅಲ್ಲ, 26/11 ಮುಂಬೈ ಮಾದರಿ ಸರಣಿ ದಾಳಿಗೆ ಸಂಚು ರೂಪಿಸಿದ್ದ ಉಗ್ರರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಷ್ಟ್ರ ರಾಜಧಾನಿ ನವದೆಹಲಿಯ ಕೆಂಪು ಕೋಟೆ ಬಳಿಕ ನಡೆದ ಸ್ಫೋಟ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ತನಿಖೆಯಿಂದ ರಕ್ಕಸರು ರೂಪಿಸಿದ್ದ ಸಂಚುಗಳು ಒಂದೊಂದಾಗಿ ಬಹಿರಂಗಗೊಳ್ಳುತ್ತಿವೆ.

ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿ ಕಾರು ಸ್ಪೋಟ ನಡೆಸಿದ್ದ ಉಗ್ರರು, ಅಸಲಿಗೆ 26/11 ಮುಂಬೈ ದಾಳಿಯ ಮಾದರಿಯಲ್ಲಿಯೇ ದೆಹಲಿ ನಗರದಾದ್ಯಂತ ಬಾಂಬ್‌ ಸ್ಪೋಟಿಸುವ ಯೋಜನೆಯನ್ನು ಹೊಂದಿದ್ದರು ಎಂಬ ವಿಚಾರ ಇದೀಗ ಬಯಲಾಗಿದೆ.

26/11 ಮುಂಬೈ ದಾಳಿಯ ಮಾದರಿಯಲ್ಲಿ ದೆಹಲಿಯಲ್ಲಿ ಸರಣಿ ದಾಳಿ ನಡೆಸಲು ಉದ್ದೇಶಿಸಿದ್ದ ಉಗ್ರರು, ಕೆಂಪು ಕೋಟೆ, ಇಂಡಿಯಾ ಗೇಟ್, ಕಾನ್ಸ್ಟಿಟ್ಯೂಷನ್ ಕ್ಲಬ್ ಮತ್ತು ಗೌರಿ ಶಂಕರ್ ದೇವಾಲಯ ಸೇರಿದಂತೆ, ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ನವೆಂಬರ್ 26, 2008ರಂದು ನಡೆದ ಮುಂಬೈ ದಾಳಿ ವೇಳೆ ಉಗ್ರರು, ತಾಜ್ ಹೋಟೆಲ್, ಒಬೆರಾಯ್ ಹೋಟೆಲ್, ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಮತ್ತು ಲಿಯೋಪೋಲ್ಡ್ ಆಸ್ಪತ್ರೆ ಸೇರಿದಂತೆ, ಒಟ್ಟು 12 ಸ್ಥಳಗಳಲ್ಲಿ ಏಕಕಾಲದಲ್ಲಿ ಗುಂಡಿನ ದಾಳಿ ಮತ್ತು ಬಾಂಬ್ ದಾಳಿಗಳು ನಡೆದಿದ್ದವು.

ದೆಹಲಿಯಲ್ಲೂ ಇದೇ ಮಾದರಿಯನ್ನು ಅನುಸರಿಸಲು ಬಯಸಿದ್ದ ಉಗ್ರರು, ಅಂತಿಮ ಕ್ಷಣದಲ್ಲಿ ಈ ಯೋಜನೆಯಿಂದ ಹಿಂದೆ ಸರಿದು ಕೇವಲ ಒಂದೇ ಸ್ಥಳದಲ್ಲಿ ದಾಳಿ ನಡೆಸಿದ್ಧಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. ಕಳೆದ ಜ.26 ಗಣರಾಜ್ಯೋತ್ಸವದಂದೇ ಕೆಂಪು ಕೋಟೆಯ ಬಳಿ ಸ್ಫೋಟಕ್ಕೆ ಉಗ್ರರು ಸಂಚು ರೂಪಿಸಿದ್ದರು. ಇದರ ಭಾಗವಾಗಿ ಡಾ. ಮುಜಮ್ಮಿಲ್‌ ಮತ್ತು ಉಮರ್‌ ನಬಿ ಇಬ್ಬರೂ ಕಳೆದ ಜನವರಿ ತಿಂಗಳ ಮೊದಲ ವಾರದಲ್ಲಿ ಕೆಂಪುಕೋಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಗೆ ಹಲವು ಭಾರೀ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದು ಆ ಪ್ರದೇಶದಲ್ಲಿನ ಭದ್ರತಾ ವ್ಯವಸ್ಥೆಗಳ ಪರಿಶೀಲನೆ ಮತ್ತು ಜನಸಂದಣಿ ಹೆಚ್ಚಿರುವ ಸಮಯದ ಬಗ್ಗೆ ತಿಳಿಯುವ ಕೆಲಸವಾಗಿತ್ತು. ಇಬ್ಬರ ಮೊಬೈಲ್ ಡಾಟಾ ಮತ್ತು ಕೆಂಪುಕೋಟೆ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿಗಳ ಅಧ್ಯಯನದಲ್ಲಿ ಕೆಂಪುಕೋಟೆ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ಅವರ ಚಲನವಲನ ಕಂಡುಬಂದಿದೆ. ಅಲ್ಲದೆ, ಪ್ರಾಥಮಿಕ ವಿಚಾರಣೆ ವೇಳೆ ಸ್ವತಃ ಮುಜಮ್ಮಿಲ್‌ ಕೂಡಾ ಜ.26ರ ಸ್ಫೋಟದ ಸಂಚಿನ ಬಗ್ಗೆ ಬಾಯಿಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ನಡುವೆ ಸೋಮವಾರ ಕೆಂಪುಕೋಟೆ ಸಿಗ್ನಲ್‌ ಬಳಿ ಸಂಭವಿಸಿದ ಸ್ಫೋಟ, ವಾಸ್ತವವಾಗಿ ಕೆಂಪುಕೋಟೆಯ ವಾಹನ ಪಾರ್ಕಿಂಗ್‌ ಜಾಗದಲ್ಲಿ ನಡೆಯಬೇಕಿತ್ತು. ಆದರೆ, ಸೋಮವಾರ ಕೆಂಪುಕೋಟೆಗೆ ರಜೆ ಇದ್ದ ಕಾರಣ ಪಾರ್ಕಿಂಗ್‌ ಜಾಗದಲ್ಲಿ ಹೆಚ್ಚು ವಾಹನಗಳು ಹಾಗೂ ಜನರು ಇರದೇ ಇದ್ದಿದ್ದು, ಉಗ್ರ ಉಮರ್ ಕನಸು ಭಗ್ನವಾಗುತಂತೆ ಮಾಡಿತ್ತು ಎಂಬ ವಿಚಾರ ತನಿಖೆಯಿಂದ ತಿಳಿದುಬಂದಿದೆ.

Most Read

error: Content is protected !!