ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ ಹೊಸಕೋಟೆ ತಾಲೂಕಿನ ಕೆಲವು ಪ್ರದೇಶಗಳಲ್ಲಿ ಇಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ನಿಗದಿತ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದೆ. ದೇವನಗೊಂದಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ನಡೆಯುವ ಕಾರಣ ಈ ವಿದ್ಯುತ್ ಕಡಿತ ಮಾಡಲಾಗುತ್ತದೆ.
ಎಫ್-1 ಕಲ್ಕುಂಟೆ ಅಗ್ರಹಾರ ಮತ್ತು ಎಫ್-2 ಶಿವನಪುರ ಫೀಡರ್‌ಗಳಿಂದ ವಿದ್ಯುತ್ ಪೂರೈಕೆಯಾಗುವ ಪ್ರದೇಶಗಳಿಗೆ ತಾತ್ಕಾಲಿಕವಾಗಿ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪುಟ್ಟಸ್ವಾಮಿ ದೃಢಪಡಿಸಿದ್ದಾರೆ. ವಿದ್ಯುತ್ ಪೂರೈಕೆಯಲ್ಲಿ ಸ್ಥಿರತೆ ಕಾಪಾಡುವ ನಿಟ್ಟಿನಲ್ಲಿ ಮತ್ತು ದಕ್ಷತೆಯನ್ನು ಸುಧಾರಿಸಲು ಕೇಬಲ್ ಲೈನ್‌ಗಳನ್ನು ಬದಲಾಯಿಸುವ ಕಾಮಗಾರಿ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ದೊಡ್ಡದುನ್ನಸಂದ್ರ ಕ್ರಾಸ್, ಅನುಗೊಂಡನಹಳ್ಳಿ, ಮುತ್ತೂರು, ಯಡಗೊಂಡನಹಳ್ಳಿ, ಮೇಡಿಮಲ್ಲಸಂದ್ರ, ಮಠಮಲ್ಲಸಂದ್ರ, ಕೆ.ಅರೇಹಳ್ಳಿ, ಕೆ.ಅಗ್ರಹಾರ, ಬ್ಯಾಲಹಳ್ಳಿ, ಮುತ್ತುಗದಹಳ್ಳಿ, ತತ್ತನೂರು, ಗುಂಡೂರು, ಬಾಗೂರು, ಮಾರನಗೆರೆ, ಸಿದ್ದನಪುರ, ಶಿವನಾಪುರ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆಗಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.
ಗ್ರಾಹಕರು ರಿಯಲ್ ಟೈಮ್ ಅಪ್ಡೇಟ್ ಪಡೆಯಲು ಅಥವಾ ಸಹಾಯಕ್ಕಾಗಿ, ಬೆಸ್ಕಾಂನ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಅಥವಾ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು ಎಂದು ಸಂಸ್ಥೆ ತಿಳಿಸಿದೆ.