ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಿಕ್ಷಣಕ್ಕೆ ವಯಸ್ಸು ಅಥವಾ ಪರಿಸ್ಥಿತಿ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಪ್ರೇರಣಾದಾಯಕ ಉದಾಹರಣೆ ಹೊರಬಂದಿದೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬ ದ್ವಿತೀಯ ಪಿಯುಸಿ ಕಲಾ ವಿಭಾಗದ ಪರೀಕ್ಷೆಯಲ್ಲಿ ಶೇ. 80.16 ಅಂಕಗಳನ್ನು ಗಳಿಸಿ ಎಲ್ಲರ ಗಮನ ಸೆಳೆದಿದ್ದಾನೆ.
ಬೆಂಗಳೂರು ಮೂಲದ ಎಸ್. ಅಶೋಕ್ ಕುಮಾರ್ ಕಳೆದ ಒಂಬತ್ತು ವರ್ಷಗಳಿಂದ ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಶಿಕ್ಷೆಯ ನಡುವೆ ವಿದ್ಯಾಭ್ಯಾಸದತ್ತ ಹೆಚ್ಚಿನ ಆಸಕ್ತಿ ತೋರಿದ ಆತ, ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ಇಚ್ಛೆಯನ್ನು ಜೈಲು ಅಧಿಕಾರಿಗಳ ಮುಂದೆ ವ್ಯಕ್ತಪಡಿಸಿದ್ದಾನೆ. ಅದರಂತೆ ಅಧಿಕಾರಿಗಳು ದೂರ ಶಿಕ್ಷಣ ವ್ಯವಸ್ಥೆಯ ಮೂಲಕ ಅವನಿಗೆ ಪರೀಕ್ಷೆಗೆ ನೋಂದಣಿ ಮಾಡಿಸಿ ಅಗತ್ಯ ನೆರವು ಒದಗಿಸಿದ್ದಾರೆ.
ಇದನ್ನೂ ಓದಿ:
ಅಭ್ಯಾಸಕ್ಕೆ ಅನುಕೂಲವಾಗುವಂತೆ ಜೈಲಿನಲ್ಲಿಯೇ ಪಠ್ಯಪುಸ್ತಕಗಳು ಹಾಗೂ ಪ್ರತ್ಯೇಕ ಅಧ್ಯಯನ ಕೊಠಡಿ ಸೌಲಭ್ಯ ಕಲ್ಪಿಸಲಾಗಿತ್ತು. ಸ್ವಯಂ ಅಭ್ಯಾಸ ಮತ್ತು ದೃಢ ಸಂಕಲ್ಪದೊಂದಿಗೆ ಸಿದ್ಧತೆ ನಡೆಸಿದ ಅಶೋಕ್ ಕುಮಾರ್, ಅಂತಿಮವಾಗಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣನಾಗಿದ್ದಾನೆ.
ಈ ಸಾಧನೆ ಜೈಲಿನಲ್ಲಿರುವ ಇತರ ಕೈದಿಗಳಿಗೂ ಪ್ರೇರಣೆಯಾಗಿದ್ದು, ಪುನರ್ವಸತಿ ಹಾಗೂ ಶಿಕ್ಷಣದ ಮಹತ್ವವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಮುಂದಿನ ದಿನಗಳಲ್ಲಿ ಪದವಿ ಶಿಕ್ಷಣ ಮುಂದುವರಿಸಲು ಆಸಕ್ತಿ ತೋರಿದರೆ ಅದಕ್ಕೂ ಅಗತ್ಯ ಅವಕಾಶಗಳನ್ನು ಕಲ್ಪಿಸಲಾಗುವುದು ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.



