ಮುಖಾರವಿಂದದಲ್ಲಿ ಕಣ್ಣುಗಳ ಪಾತ್ರ ಪ್ರಮುಖವಾಗಿರುತ್ತವೆ. ಸುಂದರವಾದ ಮುಖವಿದ್ದು ವಿಕಾರವಾದ ಕಣ್ಣುಗಳಿದ್ದರೇನು ಪ್ರಯೋಜನ. ಕಣ್ಣುಗಳು ಕಾಂತಿಯುತವಾಗಿ, ಆಕರ್ಷಕವಾಗಿದ್ದರೆ ಮುಖದ ಚೆಲುವು ಇಮ್ಮಡಿಯಾಗುತ್ತದೆ. ಕಣ್ಣುಗಳ ಆರೋಗ್ಯದ ಕಡೆ ಗಮನ ಹರಿಸುವುದು ತುಂಬಾ ಮುಖ್ಯ.
ಕಣ್ಣು ಅತೀ ಸೂಕ್ಷ್ಮವಾದ ಅಂಗ. ಕಣ್ಣಿಗೆ ತೊಂದರೆಯಾದರೆ ದೈನಂದಿನ ಎಲ್ಲಾ ಕೆಲಸ ಕಾರ್ಯಗಳ ಮೇಲೆ ತೀವ್ರ ಪರಿಣಾಮ ಉಂಟಾಗುತ್ತದೆ. ಅನೇಕರಿಗೆ ಕಣ್ಣು ಕೆಂಪಾಗುವ ಸಮಸ್ಯೆಯಿದೆ. ಕಣ್ಣಿನ ನರಗಳು ಕೆಂಪಾಗಿ ರಕ್ತಕಾರಿದಂತೆ ಭಾಸವಾಗುತ್ತವೆ. ಇದಕ್ಕೆ ಅನೇಕ ಕಾರಣಗಳಿವೆ.
ನಿರಂತರವಾದ ಪ್ರಯಾಣ, ಕಣ್ಣಿನ ಮೇಲೆ ಒತ್ತಡ ಜಾಸ್ತಿಯಾಗುವುದು, ಮೊಬೈಲ್, ಟಿವಿಗಳ ಅತಿಯಾದ ಬಳಕೆ, ನಿದ್ರಾ ಹೀನತೆ ಹೀಗೆ ಅನೇಕ ಕಾರಣಗಳಿಂದಾಗಿ ಕಣ್ಣು ಕೆಂಪಾಗುತ್ತವೆ. ವಾಹನಗಳ ಹೊಗೆ, ಧೂಳು ಹಾಗೂ ಕಣ್ಣಿನಲ್ಲಿ ನೀರಿನಂಶ ಕಡಿಮೆಯಾಗುವುದರಿಂದಲೂ ಕಣ್ಣು ಕೆಂಪಾಗಲು ಸಾಧ್ಯವಿದೆ.
ಇಂತಹ ಸಮಸ್ಯೆ ಕಂಡುಬಂದಾಗ ಮನೆಯಲ್ಲಿಯೇ ಇರುವ ಅಲೋವೇರ ಎಲೆಗಳಿಂದ ಸಂಗ್ರಹಿಸಿದ ಪಲ್ಪ್ ಗಳನ್ನು ಕಣ್ಣಿನ ರೆಪ್ಪೆಯ ಮೇಲೆ ಸವರುವುದರಿಂದ ಈ ಕೆಂಪು ಕಣ್ಣು ತಿಳಿಯಾಗಲು ಸಾಧ್ಯವಿದೆ. ರಾತ್ರಿ ಮಲಗುವ ವೇಳೆ ಕಣ್ಣಿನ ರೆಪ್ಪೆಗೆ ಶುದ್ಧವಾದ ತೆಂಗಿನೆಣ್ಣೆ ಸವರಿ ಮಲಗುವುದರಿಂದ ಕಣ್ಣಿನ ಕೆಂಪು ಕಡಿಮೆಯಾಗುತ್ತದೆ. ಒಂದು ಸಣ್ಣ ಐಸ್ ಕ್ಯೂಬ್‌ನ್ನು ಶ್ವೇತವರ್ಣದ ಬಟ್ಟೆಯಲ್ಲಿ ಕಟ್ಟಿ ಕಣ್ಣಿನ ರೆಪ್ಪೆಯ ಮೇಲೆ ಮೃದುವಾಗಿ ಮಸಾಜ್ ಮಾಡಿ. ಇದರಿಂದ ಕಣ್ಣಿನ ಕೆಂಪು ನಿವಾರಣೆಯಾಗುತ್ತದೆ. ಕೊತ್ತಂಬರಿ ಕಾಳನ್ನು ತೊಳೆದು ಬಿಳಿ ವಸ್ತ್ರದಲ್ಲಿ ಕಟ್ಟಿ ಒಂದು ಲೋಟ ನೀರಿನಲ್ಲಿ ಅದ್ದಿಡಿ . ನಂತರ ಆ ನೀರನ್ನು ಕಣ್ಣಿಗೆ ಬಿಡುವುದರಿಂದ ಕಣ್ಣಿನ ಆರೋಗ್ಯ ಹೆಚ್ಚಾಗುತ್ತದೆ. ಉರಿ ಹಾಗೂ ಕೆಂಪು ನಿವಾರಣೆಯಾಗುತ್ತದೆ.