ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರ ಇಂದು ಪೌರತ್ವ ತಿದ್ದುಪಡಿ ಕಾಯ್ದೆ (CAA) ನಿಯಮ ಜಾರಿಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.
ಈಗಾಗಲೇ ಕೇಂದ್ರ ಗೃಹಸಚಿವ ಅಮಿತ್ ಶಾ ( Amit Shah) ಲೋಕಸಭೆ ಚುನಾವಣೆಗೂ ಮುನ್ನ ಸಿಎಎಯನ್ನು ಜಾರಿಗೆ ತರುತ್ತೇವೆ ಎಂದು ಹೇಳಿದ್ದು, ಹೀಗಾಗಿ ಇಂದು ಜಾರಿಗೊಳ್ಳುವ ಲಕ್ಷಣಗಳು ಎದ್ದುಕಾಣುತ್ತಿದೆ.
ಇಂದು ಸಿಎಎ ಬಗ್ಗೆ ನಿಯಮಗಳನ್ನು ಜಾರಿ ಮಾಡುವ ಸಾಧ್ಯತೆಗಳು ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿದೆ. ಇಂದು ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಿಎಎ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ. ಇನ್ನು ಪ್ರಧಾನಿ ಮೋದಿ ಅವರು ಇಂದು ಸಂಜೆ ದೇಶವನ್ನುದ್ದೇಶಿ ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಸಿಎಎ ಬಗ್ಗೆ ಉಲ್ಲೇಖಿಸುವ ಸಾಧ್ಯತೆಗಳು ಇದೆ ಎಂದು ಹೇಳಲಾಗಿದೆ.
ಈ ಕಾಯ್ದೆಯಿಂದ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಹಿಂದೂ, ಸಿಖ್, ಜೈನ ಬೌದ್ಧ, ಕ್ರಿಶ್ಚಿಯನ್ ಮತ್ತು ಪಾರ್ಸಿ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ಪಡೆಯಲು ಕಾನೂನು ಸುಲಭಗೊಳಿಸುತ್ತದೆ. ಡಿಸೆಂಬರ್ 31, 2014 ರ ಮೊದಲು ಭಾರತಕ್ಕೆ ಬಂದಿರುವ ಈ ದೇಶಗಳ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡುವ ಉದ್ದೇಶವನ್ನು ಈ ಕಾನೂನು ಹೊಂದಿದೆ ಎಂದು ಶಾ ಹೇಳಿದ್ದರು.
ಇನ್ನು ಈ ಕಾನೂನು 2019ರಲ್ಲಿ ಜಾರಿಗೆ ಬಂದ ನಂತರ, ದೇಶದ ಹಲವಾರು ಭಾಗಗಳಲ್ಲಿ ಪ್ರತಿಭಟನೆಗಳು ಭುಗಿಲೆದ್ದವು. ಕಳೆದ ತಿಂಗಳು, ಸಿಎಎ ಕಾನೂನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಅಮಿತ್ ಶಾ ಹೇಳಿದ್ದರು. ಇದು ಚುನಾವಣೆಗೂ ಮುನ್ನ ಜಾರಿಯಾಗಲಿದೆ. ಇದು ದೇಶದ ಕಾನೂನು, ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಈ ಕಾನೂನಿಗೆ ಈಗಾಗಲೇ ಅಡಿಪಾಯ ಹಾಕಲಾಗಿದೆ ಎಂದಿದ್ದರು.
ಸಿಎಎ ದೇಶದ ಕಾಯಿದೆ, ಚುನಾವಣೆಯ ಮೊದಲು ಅದನ್ನು ಜಾರಿಗೊಳಿಸಲಾಗುವುದು. ಅದರ ಸುತ್ತ ಯಾವುದೇ ಗೊಂದಲ ಇರಬಾರದು. ಈ ಕಾನೂನಿನ ಬಗ್ಗೆ ನಮ್ಮ ದೇಶದಲ್ಲಿ ಅಲ್ಪಸಂಖ್ಯಾತರು ಮತ್ತು ವಿಶೇಷವಾಗಿ ನಮ್ಮ ಮುಸ್ಲಿಂ ಸಮುದಾಯವನ್ನು ಪ್ರಚೋದಿಸಲಾಗುತ್ತಿದೆ. CAA ಯಾರ ಪೌರತ್ವವನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಹಾಗೂ ಈ ಕಾನೂನಿನಲ್ಲಿ ಇದಕ್ಕೆ ಅವಕಾಶವಿಲ್ಲ. ಸಿಎಎ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ನಿರಾಶ್ರಿತರಿಗೆ ಪೌರತ್ವವನ್ನು ಒದಗಿಸುವ ಕಾಯಿದೆ ಎಂದು ಅಮಿತ್ ಶಾ ಹೇಳಿದ್ದರು.