ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜೀನಾಮೆ ಕೊಡ್ತೀನಿ ಎಂದು ನಾನು ಎಲ್ಲೂ ಹೇಳಿಲ್ಲ. ಅದೆಲ್ಲ ವಾಟ್ಸಾಪ್ ಯುನಿವರ್ಸಿಟಿಯಲ್ಲಿ ಬಂದಂತಹ ವಿಷಯ. ನನ್ನ ಪರಮೋಚ್ಛ ನಾಯಕಿ ಸೋನಿಯಾ ಗಾಂಧಿಯವರು ನನ್ನ ಮೇಲೆ ಜವಾಬ್ದಾರಿ ಕೊಟ್ಟು ಪರಿಷತ್ ಸದಸ್ಯತ್ವ ಸ್ಥಾನ ನೀಡಿದ್ದಾರೆ.
ಅದನ್ನ ನಿಭಾಯಿಸುತ್ತಿದ್ದೇನೆ. ರಾಜೀನಾಮೆ ನೀಡುವುದಾದರೆ ಸೋನಿಯಾಗಾಂಧಿ ಹಾಗೂ ಸಭಾಪತಿ ಅವರಿಗೆ ನೀಡುತ್ತೇನೆ. ಸಚಿವ ಸ್ಥಾನ ಇಲ್ಲದಿದ್ದರೂ ನಾನು ಪರಿಷತ್ ನಲ್ಲಿ ಸಾಮಾನ್ಯ ಸದಸ್ಯನಾಗಿರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಸ್ಪಷ್ಟ ಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ಮೇಲ್ಮನೆ ವಿಪಕ್ಷ ನಾಯಕರನ್ನು, ಸಭಾನಾಯಕರನ್ನು ಮಾಡುವುದು ಸಂಪ್ರದಾಯ, ಪದ್ದತಿ ಹಿಂದಿನಿಂದಿಲೂ ಇತ್ತು. ಆ ಸಂಪ್ರದಾಯ ಮುರಿದಿದ್ದಾರೆ. ಸಚಿವ ಸ್ಥಾನ ಅದು ಮುಖ್ಯಮಂತ್ರಿಗಳ ಪರಮಾಧಿಕಾರ. ನಾನೆಂದೂ ಸಚಿವ ಸ್ಥಾನ ಬೇಕು ಎಂದು ಕೇಳಿಲ್ಲ. ಪರಿಷತ್ ನಲ್ಲಿ ಸಭಾನಾಯಕರನ್ನಾಗಿ ಯಾರನ್ನ ಮಾಡಬೇಕೆಂದು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಯವರನ್ನೇ ಕೇಳಿ ಎಂದರು.
ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲು ಕೇವಲ ಒಂದು ಹೆಜ್ಜೆ ಮಾತ್ರ ಇದೆ. ಅಧಿಕಾರ ಹಂಚಿಕೆ ಕೇವಲ ಏಳು ಜನರಿಗೆ ಮಾತ್ರ ಗೊತ್ತಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆಸಿ ವೇಣುಗೋಪಾಲ್ ಹಾಗೂ ಸುರ್ಜೇವಾಲಾ ಅವರಿಗೆ ಮಾತ್ರ ಗೊತ್ತಿದೆ. ಉಳಿದವರು ಯಾರೇ ಮಾತಾಡಿದರೂ ಕೇವಲ ಒಬ್ಬರನ್ನ ಓಲೈಸಿಕೊಳ್ಳಲು ಮಾತ್ರ. ಯಾರೇ ಅಧಿಕಾರ ಹಂಚಿಕೆ ಬಗ್ಗೆ ಮಾತಾಡಿದರೂ ಅದು ಸುಳ್ಳು ಎಂದು ತಿಳಿಸಿದರು.
ನನ್ನ ಸಾಮಾಜಿಕ ನ್ಯಾಯದ ಸಿದ್ದಾಂತಕ್ಕೂ, ಅಹಿಂದ ರಾಜಕೀಯಕ್ಕೂ ವ್ಯತ್ಯಾಸ ಇದೆ. ನಾನು ಸರ್ವಧರ್ಮ ಸಮ ಬಾಳ್ವೆಯಲ್ಲಿ ನಂಬಿಕೆ ಇಟ್ಟವನು. ಕಾಂಗ್ರೆಸ್ ಸಿದ್ದಾಂತದಲ್ಲಿ ನಂಬಿಕೆ ಇಟ್ಟಿದ್ದೇನೆ. ಎಲ್ಲಿಯವರೆಗೂ ಇರು ಅಂತಾರೊ, ಅಲ್ಲಿಯವರೆಗೂ ನಾನು ಇರ್ತಿನಿ ಎಂದು ಹೇಳಿದರು.
ಕಾಲ ಬಂದಾಗ ಎಲ್ಲವನ್ನೂ ಹೇಳುತ್ತೇನೆ. ಯಾವ ಸಂಕೋಚವೂ ಇಲ್ಲ, ತಾಪತ್ರಯವೂ ಇಲ್ಲ. ಪಕ್ಷದಲ್ಲಿ ಎಲ್ಲರೂ ಅವರವರ ರೀತಿಯಲ್ಲಿ ಪಕ್ಷಕ್ಕಾಗಿ ದುಡಿದಿರುತ್ತಾರೆ. ನಾನು ಪಕ್ಷ ಕಟ್ಟಿದವನು. ರಾಜೀನಾಮೆರಾಜೀನಾಮೆ ವಿಷಯ ಎಲ್ಲಿಂದ ಹುಟ್ಟಿದೆ ಗೊತ್ತಿಲ್ಲ. ರಾಜೀನಾಮೆ ಕೊಡಲು ನಾನು ಬಾಡಿಗೆ ಮನೆಯಿಂದ ಬಂದವನಲ್ಲ ಸ್ವಂತ ಮನೆಯಲ್ಲಿದ್ದೇನೆ. ವೀರಪ್ಪ ಮೊಯಿಲಿಯವರ ಮಾತಿಗೆ ನಾನೇನು ಹೇಳೊಲ್ಲ, ಅವರ ಜ್ಞಾನಭಂಡಾರ ಇರುವಂತವರು. ಅವರ ಮಾತಿಗೆ ನಾನೇನು ಹೇಳೊಲ್ಲ ಎಂದರು.
ಪಕ್ಷ ಭರವಸೆ ಕೊಟ್ಟ ಗ್ಯಾರೆಂಟಿಗಳನ್ನ ಸರ್ಕಾರ ನೂರಕ್ಕೆ ನೂರು ಮಾಡಲಿದೆ. ಯಾವ ಅನುಮಾನವೂ ಬೇಡ. ಗ್ಯಾರಂಟಿಗಳ ಬಗ್ಗೆ ಅಂಕಿಅಂಶ ಸಂಗ್ರಹಿಸುತ್ತಿದ್ದಾರೆ. ಸರ್ಕಾರದ ನೀತಿ ನಿಯಮದ ಏನು ಮಾಡಬೇಕೆಂದು ಸಮಯ ತೆಗೆದುಕೊಳ್ಳುತ್ತಿದ್ದಾರೆ. ಅದು ಬಂದ ನಂತರ ಗ್ಯಾರಂಟಿ ಖಂಡಿತ ಜಾರಿಯಾಗುತ್ತೆ ಎಂದರು.