ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲುಗು ದೇಶಂ ಪಕ್ಷದ ಸಂಸ್ಥಾಪಕ ಮತ್ತು ಅವಿಭಜಿತ ಆಂಧ್ರಪ್ರದೇಶದ ಮಾಜಿ ಸಿಎಂ, ವಿಶ್ವವಿಖ್ಯಾತ ನಟ ಸಾರ್ವಭೌಮ ನಂದಮೂರಿ ತಾರಕ ರಾಮರಾವ್ (ಎನ್‌ಟಿಆರ್) ಅವರ ಶತಮಾನೋತ್ಸವವನ್ನು ಆಚರಿಸಲು 100ರೂ. ಬೆಳ್ಳಿ ನಾಣ್ಯವನ್ನು ಕೇಂದ್ರ ಸರ್ಕಾರ ಮುದ್ರಿಸಿದೆ. ಈ ಸ್ಮರಣಾರ್ಥ ನಾಣ್ಯವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಇಂದು ಬಿಡುಗಡೆ ಮಾಡಲಿದ್ದು, ರಾಷ್ಟ್ರಪತಿ ಭವನದ ಸಾಂಸ್ಕೃತಿಕ ಕೇಂದ್ರದಲ್ಲಿ ಬೆಳಗ್ಗೆ 10.30ರಿಂದ ಕಾರ್ಯಕ್ರಮ ಆರಂಭವಾಗಲಿದೆ.
ನಾಣ್ಯ ಬಿಡುಗಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು, ಎಪಿ ಬಿಜೆಪಿ ರಾಜ್ಯಾಧ್ಯಕ್ಷೆ ದಗ್ಗುಬಾಟಿ ಪುರಂದೇಶ್ವರಿ, ಮಾಜಿ ಸಚಿವ ದಗ್ಗುಬಾಟಿ ವೆಂಕಟೇಶ್ವರ ರಾವ್ ಮತ್ತು ಎನ್‌ಟಿಆರ್ ಅವರ ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ. ಮೇಲಾಗಿ ಎನ್ ಟಿಆರ್ ಜೊತೆ ಸಿನಿಮಾ, ರಾಜಕೀಯ ಕ್ಷೇತ್ರಗಳಲ್ಲಿ ಕೆಲಸ ಮಾಡಿದ ಹಲವು ಆಪ್ತರು ಉಪಸ್ಥಿತರಿರುತ್ತಾರೆ. ಸುಮಾರು 200 ಅತಿಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಟಿಡಿಪಿ ಮುಖ್ಯಸ್ಥ ಹಾಗೂ ಮಾಜಿ ಸಿಎಂ ಚಂದ್ರಬಾಬು ಭಾನುವಾರ ರಾತ್ರಿಯೇ ದೆಹಲಿ ತಲುಪಿದ್ದಾರೆ. ಚಿತ್ರನಟ, ಶಾಸಕ ನಂದಮೂರಿ ಬಾಲಕೃಷ್ಣ ಕೂಡ ಕುಟುಂಬ ಸದಸ್ಯರೊಂದಿಗೆ ರಾಷ್ಟ್ರ ರಾಜಧಾನಿ ತಲುಪಿದ್ದಾರೆ. ಈ ನಾಣ್ಯ ಬಿಡುಗಡೆ ಕಾರ್ಯಕ್ರಮಕ್ಕೆ ಯಂಗ್ ಟೈಗರ್, ಜೂನಿಯರ್ ಎನ್ ಟಿಆರ್ ಬರುತ್ತಾರಾ? ಎಂಬುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ.