ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಬರ್ ವಂಚಕರ ಮೋಸದ ಜಾಲಕ್ಕೆ ಸಿಲುಕಿ ವೃದ್ಧ ದಂಪತಿ ತಮ್ಮ ಜೀವವನ್ನೇ ಕಳೆದುಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಬಿಡಿ ಗ್ರಾಮದಲ್ಲಿ ನಡೆದಿದೆ.
ನಿವೃತ್ತ ರೈಲ್ವೆ ಉದ್ಯೋಗಿ, 83 ವರ್ಷದ ಡಿಯಾಗೋ ನಜರತ್ ಹಾಗೂ ಪತ್ನಿ, 79 ವರ್ಷದ ಪಾವಿಯಾ ನಜರತ್ ಆತ್ಮಹತ್ಯೆ ಮಾಡಿಕೊಂಡ ವೃದ್ಧ ದಂಪತಿ.
ಕಳೆದ 1 ತಿಂಗಳ ಹಿಂದೆ ಸೈಬರ್ ವಂಚಕರು ಈ ದಂಪತಿಗೆ ಪದೇ ಪದೇ ವಿಡಿಯೋ ಕಾಲ್ ಮಾಡಿ, ನಾವು ಪೊಲೀಸರು, ನಿಮ್ಮ ನಗ್ನ ಫೋಟೋಗಳು ನಮ್ಮ ಬಳಿ ಇದೆ. ಹಣ ಕೊಡದಿದ್ದರೆ ವೈರಲ್ ಮಾಡ್ತೀವಿ ಎಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಹೆದರಿಕೊಂಡ ವೃದ್ಧ ದಂಪತಿ ಈಗಾಗಲೇ ಖದೀಮರ ಅಕೌಂಟ್ಗೆ ಒಟ್ಟು 6 ಲಕ್ಷ ರೂಪಾಯಿ ಹಣ ಟ್ರಾನ್ಸ್ಪರ್ ಮಾಡಿದ್ದರು. ಹೀಗಿದ್ದರೂ ಖದೀಮರು ಮತ್ತಷ್ಟು ಹಣ ನೀಡುವಂತೆ ಪೀಡಿಸಲು ಶುರು ಮಾಡಿದ್ದಾರೆ.
ಖದೀಮರ ಕಿರುಕುಳಕ್ಕೆ ಬೇಸತ್ತ ಪತ್ನಿ ಪಾವಿಯಾ ನಜರತ್ ಅತಿಯಾದ ನಿದ್ರೆ ಮಾತ್ರೆ ಸೇವಿಸಿ, ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಳಿಕ ಪತ್ನಿ ಸಾವಿನಿಂದ ನೊಂದ ಪತಿ ಡಿಯಾಗೋ ನಜರತ್, ಡೆತ್ ನೋಟ್ ಬರೆದಿಟ್ಟು, ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.