ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಎಂ ಸಿದ್ದರಾಮಯ್ಯನವರು ರಾಜೀನಾಮೆ ನೀಡುವ ಒಳ ಸುಳಿವು ಸಿಗುತ್ತಿದ್ದಂತೆ ಕಾಂಗ್ರೆಸ್‍ನಲ್ಲಿ ಸಿಎಂ ಸ್ಥಾನಕ್ಕೇರಲು ಸೂಟ್ ಹೊಲಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗತೊಡಗಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಕಾಂಗ್ರೆಸ್‍ನಲ್ಲಿ ಸಿಎಂ ಹುದ್ದೆಗೆ ಪೈಪೋಟಿ ವಿಚಾರಕ್ಕೆ ಸಂಬಂಧಿಸಿದಂತೆ ಎಕ್ಸ್‌ನಲ್ಲಿ ಬಿಜೆಪಿ ಟಾಂಗ್ ಕೊಟ್ಟಿದ್ದು, ನಾವೆಲ್ಲರೂ ಸಿದ್ದರಾಯ್ಯನವರ ಬೆಂಬಲಕ್ಕೆ ಬಂಡೆಯಂತೆ ನಿಲ್ಲುತ್ತೇವೆ ಎಂದು ಹೇಳುತ್ತಿದ್ದವರೇ ಈಗ ತಾವು ಸಿಎಂ ಹುದ್ದೆಯ ಆಕಾಂಕ್ಷಿಗಳು ಎನ್ನತೊಡಗಿದ್ದಾರೆ. ಹೀಗಾಗಿ, ಸಿದ್ದರಾಮಯ್ಯನವರ ಕುರ್ಚಿಗೆ ಬಂದಿರುವ ಕಂಟಕವನ್ನ ಸ್ವತಃ ಆ ವಿಘ್ನ ವಿನಾಯಕನೂ ತಪ್ಪಿಸಲಾರ ಎಂದು ಕುಟುಕಿದೆ.
ಹಿರಿಯ ಶಾಸಕ ಆರ್.ವಿ ದೇಶಪಾಂಡೆ ಅವರ ಎಪಿಸೋಡ್ ಮುಗಿಯುತ್ತಿದ್ದಂತೆ ಸಚಿವ ಎಂ.ಬಿ ಪಾಟೀಲ್ ತಾವು ಸಿಎಂ ಆಕಾಂಕ್ಷಿಯೆಂದು ಡಂಗೂರ ಸಾರುತ್ತಿದ್ದಾರೆ. ಹೊರಗೆ ಬೆಂಬಲ, ಒಳಗೆ ಹಂಬಲವಿಟ್ಟುಕೊಂಡಿರುವ ಕೆಲ ಕಾಂಗ್ರೆಸ್ಸಿಗರು ಸಿದ್ದರಾಮಯ್ಯನವರು ಯಾವಾಗ ಕುರ್ಚಿ ಖಾಲಿ ಮಾಡುತ್ತಾರೆ ಎಂಬುವುದನ್ನೇ ಕಾಯುತ್ತಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.