ಹೊಸದಿಗಂತ ವರದಿ, ಮುಂಡಗೋಡ:
ತಾಲ್ಲೂಕಿನ ಕಲ್ಲಹಕ್ಕಲ ಗ್ರಾಮದ ಸನಿಹದ ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ ತಗುಲಿ ನೂರಾರು ಅಡಿಕೆ ಗಿಡಗಳು ಸುಟ್ಟಿವೆ.
ರತ್ನಮ್ಮ ಪಾಟೀಲ ಎಂಬುವರಿಗೆ ಸೇರಿದ ಮೂರು ಎಕರೆ ಅಡಿಕೆ ತೋಟದಲ್ಲಿ ಆಕಸ್ಮಿಕ ಬೆಂಕಿ ತಗುಲಿ ಗಿಡಗಳು ಸುಟ್ಟಿವೆ. ತೋಟದಲ್ಲಿ ಅಳವಡಿಸಿದ್ದ ನೀರಾವರಿ ಪರಿಕರಗಳು ಸಹ ಸುಟ್ಟು, ಲಕ್ಷಾಂತರ ರೂಪಾಯಿ ಹಾನಿ ಆಗಿದೆ.
ಎಂದಿನಂತೆ ಸಂಜೆಯ ವೇಳೆಗೆ ತೋಟಕ್ಕೆ ನೀರು ಹಾಯಿಸಲು ಬಂದಾಗ, ಡ್ರಿಪ್ ಪೈಪ್‌ಗಳು ಹೊತ್ತಿ ಉರಿಯುತ್ತಿದ್ದವು. 3-4 ಅಡಿ ಎತ್ತರಕ್ಕೆ ಬೆಳೆದಿದ್ದ ಗಿಡಗಳು ಅದಾಗಲೇ ಸುಟ್ಟಿದ್ದವು. ಗಿಡಗಳಿಗೆ ತಾಗಿಯೇ ಇದ್ದ ಒಣಗಿದ ಹುಲ್ಲು ಬೆಂಕಿಯ ವೇಗವನ್ನು ಹೆಚ್ಚಿಸಿದೆ. ಒಟ್ಟು 1050ಗಿಡಗಳಿದ್ದವು. ಅಡಿಕೆ ತೋಟದಲ್ಲಿ ವಿದ್ಯುತ್ ಲೈನ್ ಹಾದು ಹೋಗಿದೆ. ವಿದ್ಯುತ್ ಅವಘಡದಿಂದ ಬೆಂಕಿ ವ್ಯಾಪಿಸಿದೆಯೋ ಅಥವಾ ಆಕಸ್ಮಿಕವಾಗಿ ತಗುಲಿದೆಯೋ ಎಂಬುದು ಗೊತ್ತಿಲ್ಲ. ಕಣ್ಣೆದುರಿಗೆ ಅಡಿಕೆ ತೋಟಗಳು ಸುಟ್ಟಿರುವುದನ್ನು ನೋಡಲು ಆಗಲಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಬೆಳೆಸಿದ ಅಡಿಕೆ ಗಿಡಗಳು ಹಾನಿಯಾಗಿವೆʼ ಎಂದು ರೈತ ಧೀರಜ ಅಳಲು ತೋಡಿಕೊಂಡರು.