ಹೊಸದಿಗಂತ ಡಿಜಟಲ್ ಡೆಸ್ಕ್
ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯ 4ನೇ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸಿದ ಭಾರತ ಸರಣಿ ಕೈವಶ ಮಾಡಿಕೊಂಡಿದೆ. ಭಾರತ- ವಿಂಡೀಸ್ ಕದನದಲ್ಲಿ ಹಲವಾರು ದಾಖಲೆಗಳು ನಿರ್ಮಾಣವಾಗಿವೆ. ಅದರಲ್ಲಿಯೂ ಪ್ರಮುಖವಾಗಿ 2ನೇ ಟಿ20 ಕದನದಲ್ಲಿ ವಿಂಡೀಸ್ ಪರವಾಗಿ ಬೌಲಿಂಗ್ ನಲ್ಲಿ ಸರ್ವಶ್ರೇಷ್ಠ ಪ್ರದರ್ಶನ ತೋರಿ ದಾಖಲೆ ಬರೆದಿದ್ದ ಬೌಲರ್ ಒಬ್ಬ 4 ನೇ ಟಿ20 ಯಲ್ಲಿ ವಿಂಡೀಸ್ ಪರ ಅತ್ಯಂತ ಕಳಪೆ ಪ್ರದರ್ಶನ ತೋರಿದ ಕುಖ್ಯಾತಿಗೆ ಪಾತ್ರವಾಗಿದ್ದಾನೆ.
ಇಂಹಹದ್ದೊಂದು ದಾಖಲೆ ಬರೆದಿದ್ದು ವಿಂಡೀಸ್ ಬೌಲರ್ ಒಬೆಡ್ ಮೆಕಾಯ್. 2ನೇ T20 ಯಲ್ಲಿ ಅದ್ಭುತ ಸ್ಪೆಲ್ ಮಾಡಿದ್ದ ಮೆಕಾಯ್ ಮೆನ್ ಇನ್ ಬ್ಲೂ ಪಡೆಯನ್ನು ಕಾಡಿದ್ದರು. ಆ ಪಂದ್ಯದಲ್ಲಿ 4 ಓವರ್ ಎಸೆದು, 1 ಮೇಡನ್ ಸಹಿತ ಕೇವಲ 17 ರನ್ ನೀಡಿ 6 ವಿಕೆಟ್ ಕಬಳಿಸಿ ಮಿಂಚು ಹರಿಸಿದ್ದರು. ಮೆಕಾಯ್ ಭರ್ಜರಿ ಪ್ರದರ್ಶನದಿಂದ ವಿಂಡೀಸ್ ಗೆಲುವಿನ ನಗೆ ಬೀರಿತ್ತು. ಮೆಕಾಯ್ ಸಾಧನೆ ಟಿ20 ಯಲ್ಲಿ ವೆಸ್ಟ್ ಇಂಡೀಸ್ ಪರವಾಗಿ ಬೌಲರ್ ಒಬ್ಬನ ಸರ್ವಶ್ರೇಷ್ಠ ಪ್ರದರ್ಶನವಾಗಿತ್ತು. ಅಲ್ಲದೇ ಟೀಮ್ ಇಂಡಿಯಾ ವಿರುದ್ದ ಟಿ20 ಯಲ್ಲಿ 6 ಪಡೆದ ಮೊದಲ ವಿಂಡೀಸ್ ಬೌಲರ್ ಎಂಬ ದಾಖಲೆಗೂ ಅವರು ಪಾತ್ರರಾಗಿದ್ದರು.
ಆದರೆ ಶನಿವಾರ ನಡೆದ 4ನೇ ಪಂದ್ಯದಲ್ಲಿ ಎಲ್ಲವೂ ಮೆಕಾಯ್ ವಿರುದ್ಧವಾಗಿ ನಡೆದಿದೆ. ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ಮೆಕಾಯ್ ಎಸೆತಗಳನ್ನು ಮೈದಾನದ ಮೂಲೆ ಮೂಲೆಗೂ ಅಟ್ಟಿದ್ದಾರೆ. 4 ಓವರ್‌ಗಳಲ್ಲಿ 66 ರನ್ ಚಚ್ಚಿಸಿಕೊಂಡ ಮೆಕಾಯ್ ವೆಸ್ಟ್ ಇಂಡೀಸ್ ಪರವಾಗಿ ಟಿ20 ಯಲ್ಲಿ ಅತ್ಯಧಿಕ ರನ್ ನೀಡಿದ ಬೌಲರ್ ಎಂಬ ಕೆಟ್ಟ ದಾಖಲೆಗೆ ಪಾತ್ರರಾದರು.
ಈ ಹಿಂದೆ ವಿಂಡೀಸ್ ಬೌಲರ್ ಕಿಮೋ ಪೌಲ್ ಅವರು ನ್ಯೂಜಿಲ್ಯಾಂಡ್ ವಿರುದ್ಧ ನಾಲ್ಕು ಓವರ್‌ಗಳಲ್ಲಿ 64 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. 2019 ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಶ್ರೀಲಂಕಾದ ಬೌಲರ್ ರಜಿತಾ 75 ರನ್ ಬಿಟ್ಟುಕೊಟ್ಟಿದ್ದು ಟಿ20 ಯಲ್ಲಿ ಅತ್ಯಂತ ದುಬಾರಿ ಸ್ಪೆಲ್ ಗಳಲ್ಲಿ ಅಗ್ರಸ್ಥಾನದಲ್ಲಿದೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ