ಹೊಸದಿಗಂತ ವರದಿ ಬನವಾಸಿ:
ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮೊಕದ್ದಮೆ ದಾಖಲಿಸಿ, ಬಂಧಿಸುವಂತೆ ಒತ್ತಾಯಿಸಿ ಬಿಜೆಪಿ ಯುವಾ ಮೋರ್ಚಾ ವತಿಯಿಂದ ಬನವಾಸಿ ಪೊಲೀಸ್ ಠಾಣೆಯ ಪಿಎಸ್ಐ ಮಾಂತೇಶ ಕುಂಬಾರ ಅವರಿಗೆ ಶುಕ್ರವಾರ ದೂರು ಸಲ್ಲಿಸಲಾಯಿತು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮ್ ಕುಮಾರ್ ನಾಯ್ಕ್, ಅಸ್ಸಾಂ ವಿಧಾನಸಭಾ ಚುನಾವಣೆ ಪ್ರಚಾರ ಸಭೆಯಲ್ಲಿ ಆರೆಸ್ಸೆಸ್ ಹಾಗೂ ಬಿಜೆಪಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಸಂಬದ್ಧ ಹೇಳಿಕೆ ಖಂಡನೀಯವಾಗಿದೆ. ಖರ್ಗೆ ಅವರು ಕೋಮುದ್ವೇಷ ಹಬ್ಬಿಸುವ ಮಾತುಗಳನ್ನು ಆಡಿದ್ದಾರೆ. ಆರೆಸ್ಸೆಸ್ ಹಾಗೂ ಬಿಜೆಪಿ ವಿಷದ ಹಾವುಗಳಾಗಿದ್ದು, ಪ್ರಾರ್ಥನೆ ಸಮಯದಲ್ಲಿ ಅವು ಕಂಡರೆ ಹೊಡೆದು ಹಾಕಬೇಕು ಎಂಬ ಹೇಳಿಕೆ ಜಿಯಾದಿ ಸಂಸ್ಕೃತಿಯ ಪ್ರತೀಕವಾಗಿದೆ.
ಇದನ್ನೂ ಓದಿ:
ಸಾರ್ವಜನಿಕವಾಗಿ ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವುದು ಅವರ ಅನುಭವಕ್ಕೆ ಶೋಭೆಯಲ್ಲ. ಮುಸ್ಲಿಮರ ಓಲೈಕೆ ಮಾಡಲು ಏನು ಬೇಕಾದರೂ ಹೇಳಬಹುದು ಎನ್ನುವ ಮನಸ್ಥಿತಿಯನ್ನು ಅವರು ಈ ಕೂಡಲೇ ನಿಲ್ಲಿಸಬೇಕು. ಇಂತಹ ಆಕ್ಷೇಪಾರ್ಹ ಮಾತುಗಳು ಕೋಮುಗಲಭೆ ಹರಡುವ ದೇಶದ್ರೋಹಿಗಳಿಗೆ, ಮೂಲಭೂತವಾದಿಗಳಿಗೆ ಬೆಂಬಲ ಸೂಚಿಸುವ ಮಾತುಗಳಾಗಿವೆ. ಮಲ್ಲಿಕಾರ್ಜುನ ಖರ್ಗೆಯವರು ಸಂವಿಧಾನಕ್ಕೆ ವಿರುದ್ಧವಾಗಿ ಮಾತನಾಡಿದ್ದು ಅವರ ವಿರುದ್ಧ ಮೊಕದ್ದಮೆ ದಾಖಲಿಸಿ, ಬಂಧಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಪ್ರಮುಖರಾದ ಗಣೇಶ ಸಣ್ಣಲಿಂಗಣ್ಣನ್ನವರ, ಜಿಲ್ಲಾ ಓಬಿಸಿ ಮೋರ್ಚಾ ಕಾರ್ಯದರ್ಶಿ ವಿಶ್ವನಾಥ ಹಾದಿಮನಿ, ಮಂಡಲ ಉಪಾಧ್ಯಕ್ಷ ಮೃತ್ಯುಂಜಯ ಚೌದರಿ, ಯುವ ಮೋರ್ಚಾ ಮಂಡಳದ ಅಧ್ಯಕ್ಷ ಗೌತಮ್ ನಾಯ್ಕ್, ಉಪಾಧ್ಯಕ್ಷ ಅಲೋಕ ನಾಯ್ಕ್, ಕಾರ್ಯದರ್ಶಿ ದೀಪಕ್ ಕಪಾಲಿ, ಬನವಾಸಿ ಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಶೇಖರ ಗೌಡ, ಗುಡ್ನಾಪುರ ಶಕ್ತಿಕೇಂದ್ರದ ಅಧ್ಯಕ್ಷ ಶಂಭು ಗೌಡ, ಭಾಶಿ ಶಕ್ತಿಕೇಂದ್ರದ ಅಧ್ಯಕ್ಷ ಸಂತೋಷ ಗೌಡ ಸೇರಿದಂತೆ ಪಕ್ಷದ ದರ್ಶನ ಸಣ್ಣಲಿಂಗಣ್ಣನ್ನವರ, ರಾಜು ಮತ್ತುಗುಣಿ, ಪ್ರವೀಣ್ ಹಾಲಪ್ಪ, ಠಾಕೇಶ ನಾಯ್ಕ್, ಅಕ್ಷಯ ಗೌಡ ಮತ್ತಿತರರು ಇದ್ದರು.



