ಒಡಿಶಾ ರೈಲು ದುರಂತ: ಗುರುತು ಸಿಗದ ನೂರಕ್ಕೂ ಹೆಚ್ಚು ಮೃತದೇಹ, 200 ಮಂದಿಗೆ ಚಿಕಿತ್ಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ಭೀಕರ ರೈಲು ದುರಂತ ದೇಶವನ್ನೇ ಬೆಚ್ಚಿ ಬೀಳುವಂತೆ ಮಾಡಿದೆ. ಸೋಮವಾರ ಸಂಜೆಯವರೆಗೆ ಈ ಅಪಘಾತದಲ್ಲಿ 278 ಜನರು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಶವಾಗಾರದಲ್ಲಿ ಮೃತದೇಹಗಳ ರಾಶಿ ಬಿದ್ದಿವೆ. ಆದರೆ, ಮುಖಗಳು ಛಿದ್ರಗೊಂಡ ಕಾರಣ ಗುರುತು ಸಿಗದಂತಾಗಿದೆ. ಮತ್ತೊಂದೆಡೆ ಕುಟುಂಬಸ್ಥರು, ಸಂಬಂಧಿಕರು ಎಲ್ಲಿದ್ದಾರೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಅಧಿಕಾರಿಗಳು ಗೊಂದಲದಲ್ಲಿದ್ದಾರೆ. ಇದರಿಂದಾಗಿ ರೈಲು ಅಪಘಾತದ ಮೃತದೇಹಗಳನ್ನು ಇಟ್ಟಿರುವ ಪ್ರದೇಶದಲ್ಲಿ ಕರುಣಾಜನಕ ಸ್ಥಿತಿ ನಿರ್ಮಾಣವಾಗಿದೆ.

ರೈಲು ಅಪಘಾತವಾಗಿ ಐದು ದಿನಗಳಾಗಿವೆ. ಇದುವರೆಗೆ 278 ಮೃತ ದೇಹಗಳನ್ನು ಅಧಿಕಾರಿಗಳು ಗುರುತಿಸಿದ್ದಾರೆ. ಸೋಮವಾರ ಸಂಜೆಯವರೆಗೆ 117 ಮೃತ ದೇಹಗಳನ್ನು ಅವರ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಇನ್ನೂ 101 ಮೃತದೇಹಗಳನ್ನು ಗುರುತಿಸಬೇಕಿದೆ. ಎಲ್ಲವನ್ನೂ ಭುವನೇಶ್ವರದ ಏಮ್ಸ್ ಶವಾಗಾರದಲ್ಲಿ ಇರಿಸಲಾಗಿದೆ. ಸಂತ್ರಸ್ತರ ಕುಟುಂಬಗಳು ಸ್ನೇಹಿತರು ಮತ್ತು ಸಂಬಂಧಿಕರು ಅಲ್ಲಿ ಸೇರುತ್ತಿದ್ದಾರೆ. ಮತ್ತೊಂದೆಡೆ, ಈ ಅಪಘಾತದಲ್ಲಿ ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಇವರಲ್ಲಿ 200 ಮಂದಿಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರನ್ನು ಗುರುತಿಸುವುದು ಕಷ್ಟವಾಗಿರುವುದರಿಂದ ರೈಲ್ವೆ ಇಲಾಖೆ ಈ ಸಂಬಂಧ ಫೋಟೋಗಳನ್ನು ಬಿಡುಗಡೆ ಮಾಡಿದೆ. ಮುನ್ಸಿಪಲ್ ಕಾರ್ಪೊರೇಷನ್ ವೆಬ್‌ಸೈಟ್‌ಗಳಲ್ಲಿ ಎಲ್ಲಾ ಮಾಹಿತಿ ಇರಿಸಲಾಗಿದೆ. ಇದಲ್ಲದೆ, ಅಗತ್ಯವಿರುವವರು ರೈಲ್ವೆ ಸಹಾಯವಾಣಿ ಸಂಖ್ಯೆ 139, ಭವನೇಶ್ವರ ಮುನ್ಸಿಪಲ್ ಕಾರ್ಪೊರೇಷನ್ ಸಹಾಯವಾಣಿ ಸಂಖ್ಯೆ 18003450061 ಅಥವಾ 18003451929 ಗೆ ಯಾವುದೇ ಸಮಯದಲ್ಲಿ ಕರೆ ಮಾಡಬಹುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!