ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಿಳೆಯರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಬಿಜೆಪಿ ಸಂಸದ ದಿಲೀಪ್ ಘೋಷ್ (Dilip Ghosh) ಮತ್ತು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ (Supriya Shrinate) ಗೆ ಚುನಾವಣಾ ಆಯೋಗ (Election Commission) ಛೀಮಾರಿ ಹಾಕಿದೆ.
ಚುನಾವಣಾ ಸಮಯದಲ್ಲಿ ಆಯೋಗವು ಇಬ್ಬರ ಮೇಲೆ ನಿಗಾ ಇಡಲಿದೆ . ಜೊತೆಗೆ ಹೇಳಿಕೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಎಚ್ಚರಿಕೆ ನೀಡಿದೆ.
ನೀತಿ ಸಂಹಿತೆ ಉಲ್ಲಂಘಿಸಿ ವೈಯಕ್ತಿಕ ದಾಳಿ ನಡೆಸಿದ ಹಿನ್ನೆಲೆ ಚುನಾವಣಾ ಆಯೋಗ ದಿಲೀಪ್ ಘೋಷ್ ಮತ್ತು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ಅವರಿಗೆ ನೊಟೀಸ್ ಜಾರಿ ಮಾಡಿತ್ತು. ನೊಟೀಸ್ ಗೆ ಉತ್ತರಿಸಿದ ಉಭಯ ನಾಯಕರು ನೀತಿ ಸಂಹಿತೆ ಉಲ್ಲಂಘಿಸಿ ವೈಯಕ್ತಿಕ ದಾಳಿ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.
ಮುಂದೆ ಇಂತಹ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಎಚ್ಚರಿಕೆ ವಹಿಸಬೇಕು. ಅಲ್ಲದೆ, ಚುನಾವಣಾ ಸಮಯದಲ್ಲಿ ಇಬ್ಬರೂ ನಾಯಕರ ಹೇಳಿಕೆಗಳನ್ನು ಚುನಾವಣಾ ಆಯೋಗವು ವಿಶೇಷವಾಗಿ ಪರಿಶೀಲಿಸುತ್ತದೆ. ಇಬ್ಬರೂ ನಾಯಕರು ಕೀಳು ಮಟ್ಟದ ವೈಯಕ್ತಿಕ ದಾಳಿ ನಡೆಸಿದ್ದು, ಇದು ಮಾದರಿ ನೀತಿ ಸಂಹಿತೆಯ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಆಯೋಗ ಹೇಳಿದೆ.
ಸೋಮವಾರದಿಂದ ಈ ಇಬ್ಬರು ನಾಯಕರ ಚುನಾವಣಾ ಸಂಬಂಧಿತ ಸಂವಹನಗಳ ಮೇಲೆ ಆಯೋಗವು ವಿಶೇಷ ಮತ್ತು ಹೆಚ್ಚುವರಿ ನಿಗಾ ಇರಿಸಲಿದೆ. ಇದೇ ವೇಳೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮತ್ತು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ತಮ್ಮ ಪಕ್ಷದ ನಾಯಕರಿಗೆ ಎಚ್ಚರಿಕೆ ನೀಡುವಂತೆ ಆಯೋಗವು ಆಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಸೂಚನಾ ಪ್ರತಿಯನ್ನು ಕಳುಹಿಸಿದೆ.