ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಆಕ್ಷೇಪಾರ್ಹ ಟ್ವೀಟ್ ಮಾಡಿರುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ವಿರುದ್ಧ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಹೈಕೋರ್ಟ್ನಲ್ಲಿ ಇಂದು ವಿಚಾರಣೆ ನಡೆದಿದೆ.
ಈ ವೇಳೆ ಅಮಿತ್ ಮಾಳವೀಯ ಪರ ಸಂಸದ, ವಕೀಲರೂ ಆಗಿರುವ ತೇಜಸ್ವಿ ಸೂರ್ಯ (Tejasvi Surya) ಅವರು ವಿಚಾರಣೆಗೆ ಹಾಜರಾದರು. ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ವಿಚಾರಣೆ ನಡೆಸಿದ್ದು, ತೇಜಸ್ವಿ ಸೂರ್ಯ ವಾದ ಮಂಡಿಸಿದರು.
ದೇಶದ ಜನರ ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸುವಂಥ ಟ್ವೀಟ್ ಅನ್ನು ಮಾಳವೀಯ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಆದರೆ, ಮಾಳವಿಯಾ ವಿರುದ್ಧ ಆರೋಪಿಸಲಾದ ಅಂಶಗಳು ಭಾರತೀಯ ದಂಡಸಂಹಿತೆಯ 153(A) & 505(2) ರ ಅಡಿ ಪ್ರಕರಣ ದಾಖಲಿಸಿಕೊಳ್ಳುವ ವ್ಯಾಪ್ತಿಗೆ ಬರುವುದಿಲ್ಲ ಎಂದು ಕೋರ್ಟ್ ಪರಿಗಣಿಸಿದೆ. ಹೀಗಾಗಿ ಮುಂದಿನ ತನಿಖೆ ಮತ್ತು ಪ್ರಕ್ರಿಯೆಗಳಿಗೆ ಮಧ್ಯಂತರ ತಡೆ ನೀಡಿದೆ.
ವಿಚಾರಣೆಗೆ ಹಾಜರಾಗುವುದಕ್ಕೂ ಮುನ್ನ ಟ್ವೀಟ್ ಮಾಡಿದ್ದ ಸೂರ್ಯ, ಅಮಿತ್ ಮಾಳವಿಯಾ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರಾಜಕೀಯ ಪ್ರೇರಿತವಾಗಿದೆ. ರಾಹುಲ್ ಗಾಂಧಿ ವಿರುದ್ಧ ಅವರು ಹೇಳಿಕೆ ನೀಡಿದ್ದಕ್ಕಾಗಿ ಐಪಿಸಿ 153 ಎ ಮತ್ತು 505 (2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೇಲಿನ ಎರಡೂ ಸೆಕ್ಷನ್‌ಗಳು ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಬಗ್ಗೆ ವ್ಯವಹರಿಸುತ್ತದೆ. ಹಾಗಾದರೆ, ರಾಹುಲ್ ಗಾಂಧಿ ಎಂದರೇನು? ಒಬ್ಬ ವ್ಯಕ್ತಿ ಅಥವಾ ಒಂದು ಗುಂಪು ಅಥವಾ ಒಂದು ವರ್ಗವೇ? ನಾವು ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಮತ್ತು ನಮಗೆ ನ್ಯಾಯ ದೊರೆಯಲಿದೆ ಎಂದು ಉಲ್ಲೇಖಿಸಿದ್ದರು.