ಚುನಾವಣಾ ನೀತಿ ಸಂಹಿತೆ ಇದ್ದರೂ ಕಚೇರಿ ತೆರೆದು ಸಭೆ: ಶಾಸಕರ ಕೊಠಡಿಗೆ ಬಿತ್ತು ಬೀಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿದ ನಗರಸಭೆ ಹಾಗೂ ಜಲಸಿರಿ ಯೋಜನೆ ಅಧಿಕಾರಿಗಳ ಜತೆ ಶಾಸಕರ ಕಚೇರಿ ಮೇಲ್ಭಾಗದ ಸಭಾಂಗಣದಲ್ಲಿ ಸೋಮವಾರ ಪುತ್ತೂರು ಶಾಸಕ ಅಶೋಕ್ ರೈ ಸಭೆ ನಡೆಸಿದ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಚುನಾವಣಾ ವಿಭಾಗದ ಅಧಿಕಾರಿಗಳು ನೀತಿ ಸಂಹಿತೆ ಉಲ್ಲಂಘನೆ ದೂರು ದಾಖಲಿಸಿದ್ದಾರೆ.

ಪುತ್ತೂರು ನಗರದಲ್ಲಿ ಕುಡಿಯುವ ನೀರು ಸರಬರಾಜಿಗೆ ಸಂಬಂಧಿಸಿ ಜಲಸಿರಿ ಕಾಮಗಾರಿ ನಡೆಸಲಾಗಿದ್ದು, ಕೆಲಸ ಪೂರ್ತಿಯಾಗದೆ ಹಲವು ಕಡೆಗಳಲ್ಲಿ ನೀರಿಗೆ ಸಮಸ್ಯೆ ಉಂಟಾಗಿದೆ ಎಂಬ ಆರೋಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಜಲಸಿರಿ ಯೋಜನೆ ಸಂಬಂಧಿಸಿದ ಅಧಿಕಾರಿಗಳು ಹಾಗೂ ವಾಟರ್‍ಮೆನ್‍ಗಳ ಸಭೆಯನ್ನು ಶಾಸಕರು ಕರೆದಿದ್ದು, ಬೆಳಗ್ಗೆ 12 ಗಂಟೆಗೆ ಸಭೆ ಆರಂಭಗೊಂಡಿತ್ತು. ಸಭೆ ನಡೆಯುತ್ತಿದ್ದಂತೆ ಶಾಸಕರಿಗೆ ಅಧಿಕಾರಿಗಳಿಂದ ನೀತಿ ಸಂಹಿತೆ ಇರುವುದರಿಂದ ಸಭೆ ನಡೆಸದಂತೆ ವಿನಂತಿಸಿ ದೂರವಾಣಿ ಕರೆಗಳೂ ಬಂದಿದ್ದವು. ಆದರೆ ನೀತಿ ಸಂಹಿತೆ ನೆಪದಲ್ಲಿ ಜನರಿಗೆ ಅಗತ್ಯ ಮೂಲ ಸೌಕರ್ಯವಾದ ನೀರು ಸರಬರಾಜು ಸಮಸ್ಯೆಯನ್ನು ನಿರ್ಲಕ್ಷಿಸಲು ಸಾಧ್ಯವಾಗದು ಎಂದು ಶಾಸಕರು ಉತ್ತರ ನೀಡಿದ್ದರು.

ಸಭೆ ಆರಂಭಗೊಂಡ ಕೆಲವೇ ಕ್ಷಣಗಳಲ್ಲಿ ತಹಶೀಲ್ದಾರ್ ಕುಂಇ ಅಹಮ್ಮದ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಹನಮ ರೆಡ್ಡಿ ಸೇರಿದಂತೆ ಚುನಾವಣಾ ಜವಾಬ್ದಾರಿಯ ಅಧಿಕಾರಿಗಳ ತಂಡ ಆಗಮಿಸಿ ಸಭೆಯನ್ನು ಮೊಟಕುಗೊಳಿಸುವಂತೆ ಶಾಸಕರಲ್ಲಿ ವಿನಂತಿಸಿದರು.

ನಗರದಲ್ಲಿ ಹಲವು ಕಡೆ ನೀರಿಗೆ ಸಂಬಂಧಿಸಿದಂತೆ ಸಮಸ್ಯೆಯಿದೆ. ಜನರು ಬಂದು ನಮ್ಮಲ್ಲಿ ನೀವು ಏನು ಮಾಡುತ್ತಿದ್ದೀರಿ ? ಎಂದು ಪ್ರಶ್ನಿಸುತ್ತಿದ್ದಾರೆ. ಎರಡು ದಿನಗಳಿಂದ ಸುರಿದ ಗಾಳಿ ಮಳೆಗೆ ಹಲವು ಮನೆಗಳಿಗೆ ಹಾನಿಯಾಗಿದೆ. ನೀರು ರಸ್ತೆಯಲ್ಲಿ ಹರಿಯುವ ಚರಂಡಿ ಅವ್ಯವಸ್ಥೆಗಳು ಕಂಡು ಬಂದಿವೆ. ಆದರೆ ಅಧಿಕಾರಿಗಳು ಸ್ಪಂದಿಸಿಲ್ಲ. ಜನರಿಗೆ ನೀರು ಕೊಡುವುದು ನಮ್ಮ ಧರ್ಮ ಎಂದು ಶಾಸಕರು ಸಮಜಾಯಿಸಿ ನೀಡಿದರು. ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವ ಭರವಸೆ ನೀಡುವಂತೆ ಅಧಿಕಾರಿಗಳಿಗೆ ಒತ್ತಾಯಿಸಿದರು. ಅಧಿಕಾರಿಗಳು ಜನರ ಸ್ಪಂದಿಸುವ ಭರವಸೆ ನೀಡಿದ ಬಳಿಕ ಸಭೆ ಮೊಟಕುಗೊಳಿಸಲಾಯಿತು.

ಕಚೇರಿಗೆ ಬೀಗ
ಲೋಕಸಭಾ ಚುನಾವಣಾ ನೀತಿ ಸಂಹಿತೆ ಇನ್ನೂ ಮುಂದುವರೆದಿರುವುದರಿಂದ ಹಾಗೂ ವಿಧಾನಪರಿಷತ್ ಚುನಾವಣಾ ನೀತಿ ಸಂಹಿತೆಯೂ ಜಾರಿಯಲ್ಲಿದೆ. ಆದಾಗ್ಯೂ ಶಾಸಕರ ಕಚೇರಿ ವಾರದಿಂದ ತೆರೆದಿತ್ತು. ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಲು ಈ ಹಿಂದಿನಂತೆ ಶಾಸಕರ ಕಚೇರಿಗೆ ಭೇಟಿ ನೀಡುತ್ತಿದ್ದರು. ಈ ಕುರಿತು ಜಿಲ್ಲಾ ಚುನಾವಣಾ ಅಧಿಕಾರಿಯಾಗಿರುವ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರಿಗೆ ದೂರು ಸಲ್ಲಿಕೆಯಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಸೋಮವಾರ ದಾಳಿ ನಡೆಸಿದ ಅಧಿಕಾರಿಗಳು ಶಾಸಕರ ಕಚೇರಿಯಲ್ಲಿದ್ದ ಜನರನ್ನು ಹೊರಗೆ ಕಳುಹಿಸಿ ಶಾಸಕರ ಕಚೇರಿ ಕೊಠಡಿಗಳು, ಮುಂಭಾಗದ ಗೇಟಿಗೆ ಬೀಗ ಜಡಿದಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಗೆ ದೂರು
ಶಾಸಕರ ಕಚೇರಿಯ ಬೀಗ ತೆಗೆದು ಅನಧಿಕೃತವಾಗಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಸಭೆ ನಡೆಸಿರುವ ಕುರಿತಂತೆ ತಹಶೀಲ್ದಾರ್ ಕುಂಇ ಅಹಮ್ಮದ್ ಅವರು ಜಿಲ್ಲಾ ಚುನಾವಣಾಧಿಕಾರಿಯವರು ಹಾಗೂ ಪುತ್ತೂರು ಸಹಾಯಕ ಚುನಾವಣಾಧಿಕಾರಿಯವರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!