ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಜೆಪಿ ಸರ್ಕಾರಕ್ಕಿಂತ ಈಗಿನ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳು ಹೆಚ್ಚು ಕಮಿಷನ್ ಪಡೆಯುತ್ತಿದ್ದಾರೆ ಎಂದು ರಾಜ್ಯ ಗುತ್ತಿಗೆದಾರರ ಸಂಘ ಆರೋಪಿಸಿದೆ.
ನಿಮ್ಮ ಸರಕಾರದ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು ಸಂಬಂಧಪಟ್ಟ ಸಚಿವರನ್ನು ಭೇಟಿ ಮಾಡಿ ಭ್ರಷ್ಟಾಚಾರದ ಬಗ್ಗೆ ಗಮನಕ್ಕೆ ತಂದರು ಕೂಡ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಕಾಮಗಾರಿ ಮುಕ್ತಾಯಗೊಂಡಿದ್ದರೂ ಬಿಲ್ ಪಾವತಿಗಳು ಮೂರು ವರ್ಷಗಳಿಂದ ಬಾಕಿ ಉಳಿದಿದೆ. ಗುತ್ತಿಗೆದಾರರ ಸಂಕಷ್ಟಗಳನ್ನು ಸಾಕಷ್ಟು ಬಾರಿ ತಮ್ಮಲ್ಲಿ ಹೇಳಿಕೊಂಡಿದ್ದರೂ, ಗಂಭೀರವಾಗಿ ಪರಿಗಣಿಸಿಲ್ಲ. ಹೀಗೆ ಮುಂದುವರಿದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿ ದೂರು ನೀಡುತ್ತೇವೆ ಎಂದು ಹೇಳಿದೆ.
ಹಲವು ಗುತ್ತಿಗೆದಾರರು ಹಣ ಬಿಡುಗಡೆ ಮಾಡಿ ಇಲ್ಲವೇ ದಯಾಮರಣ ನೀಡಿ ಎಂದು ಹೇಳುತ್ತಿರುವುದು ಕೂಡ ನಿಮ್ಮ ಗಮನಕ್ಕೆ ಬಂದಿರಬಹುದು ಆದ್ದರಿಂದ ಹಣ ಬಿಡುಗಡೆ ಕ್ರಮ ಕೈಗೊಳ್ಳಿ ಎಂದು ಸಂಘ ಆಗ್ರಹಿಸಿದೆ.
ಈ ಪತ್ರಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಚ್ 3ರಂದು ಸಭೆ ಕರೆದಿರುವುದಾಗಿ ಅಧ್ಯಕ್ಷ ಆರ್ ಮಂಜುನಾಥ್ ತಿಳಿಸಿದ್ದಾರೆ.