ಹೊಸದಿಗಂತ ವರದಿ ಹಾಸನ:
ಅಡುಗೆ ಮಾಡದ ವಿಚಾರಕ್ಕೆ ತಾಯಿ-ಮಗನ ನಡುವೆ ಶುರುವಾದ ಜಗಳ ತಾರಕಕ್ಕೇರಿ ತಾಯಿಯ ಕೊಲೆಯಲ್ಲಿ ಅಂತ್ಯಗೊಂಡಿರುವ ದಾರುಣ ಘಟನೆಯೊಂದು ಜಿಲ್ಲೆಯ ಆಲೂರು ತಾಲೂಕಿನ, ಕದಾಳುಚನ್ನಾಪುರ ಗ್ರಾಮದಲ್ಲಿ ನಡೆದಿದೆ.
ಪ್ರೇಮ (45) ಕೊಲೆಯಾದ ತಾಯಿ. ಸಂತೋಷ (19) ತಾಯಿಯನ್ನೇ ಕೊಂದ ಕೊಲೆಗಡುಕ. ನಿನ್ನೆ ರಾತ್ರಿ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ ಸಂತೋಷ ಅಡುಗೆ ಮಾಡದ ವಿಚಾರಕ್ಕೆ ತಾಯಿ ಜೊತೆ ಜಗಳ ತೆಗೆದಿದ್ದಾನೆ. ಮಾತಿಗೆ ಮಾತು ಬೆಳೆದು ಅಮಲಿನಲ್ಲಿದ್ದ ಸಂತೋಷ ದೊಣ್ಣೆಯಿಂದ ತಾಯಿಯ ತಲೆಗೆ ಬಲವಾಗಿ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ತಾಯಿ ಪ್ರೇಮರನ್ನು ಕುಟುಂಬಸ್ಥರು ಹಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.
ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.