ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ BQ.1 ತಳಿಯ ಮೊದಲ ಪ್ರಕರಣ ವರದಿಯಾಗಿದ್ದು, ಈ ಹಿನ್ನೆಲೆ ಕರ್ನಾಟಕ ಸರಕಾರ ಸಲಹಾ ಪತ್ರ ಹೊರಡಿಸಿದ್ದು, ಪ್ರತಿಯೊಬ್ಬರು ತಪ್ಪದೇ ಮೂರು ಡೋಸ್ ಲಸಿಕೆ ಹಾಗೂ ಕೊರೋನಾ ಸೂಕ್ತ ನಡವಳಿಕೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಹೇಳಿದೆ.
ನೆರೆಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ರೂಪಾಂತರಿ BQ.1 ತಳಿಯ ಮೊದಲ ಪ್ರಕರಣ ವರದಿಯಾಗಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆ ವತಿಯಿಂದ ಸಲಹಾ ಪತ್ರ ಹೊರಡಿಸಲಾಗಿದೆ.
ಪ್ರತಿಯೊಬ್ಬರು ತಪ್ಪದೇ ಮೂರು ಡೋಸ್ ಲಸಿಕೆ ಪಡೆದುಕೊಳ್ಳಬೇಕು ಹಾಗೂ ಕೊರೊನಾ ಸೂಕ್ತ ನಡವಳಿಕೆಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕೋರುತ್ತೇನೆ. pic.twitter.com/q652lUJwz8
— Dr Sudhakar K (@mla_sudhakar) October 25, 2022
ಈ ಕುರಿತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಟ್ವೀಟ್ರಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇನ್ನು ದೀಪಾವಳಿ ಹಬ್ಬ ಮತ್ತು ಕನ್ನಡ ರಾಜ್ಯೋತ್ಸವ ಆಚರಣೆಯ ಸಂದರ್ಭದಲ್ಲಿ ಸಾರ್ವಜನಿಕರು ಗುಂಪು ಸೇರುವ ಸಾಧ್ಯತೆಗಳು ಅಧಿಕವಾಗಿರುವುದರಿಂದ, ಈ ಸಲಹಾ ಪತ್ರವನ್ನು ಹೊರಡಿಸಲಾಗುತ್ತಿದೆ.
ದೀಪಾವಳಿ ಹಬ್ಬ, ಕನ್ನಡ ರಾಜ್ಯೋತ್ಸವ ಸೇರಿದಂತೆ ಇತರ ಸಂಭ್ರಮಾಚರಣೆಗಳಲ್ಲಿ ಹೆಚ್ಚಿನ ಜನರು ಸೇರುವ ಸಾಧ್ಯತೆ ಇದೆ. ಇದರಿಂದ ವೈರಸ್ ವೇಗವಾಗಿ ಹರಡುವ ಹಾಗೂ ಅಪಾಯ ತಂದೊಡ್ಡುವ ಸಾಧ್ಯತೆ ಇದೆ. ಮಾಸ್ಕ್, ಸಾಮಾಜಿಕ ಅಂತರ, ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ಸೂಚಿಸಲಾಗಿದೆ. ಜ್ವರ, ಕೆಮ್ಮು ಸೇರಿದಂತೆ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಬೇಕು. ತಕ್ಷಣವೇ ಆ್ಯಂಟಿ ಜೆನ್ ಪರೀಕ್ಷೆ, ಆರ್ಟಿಪಿಸಿಆರ್, ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಫಲಿತಾಂಶ ಬರುವವರೆಗೂ ಹಾಗೂ ಪಾಸಿಟೀವ್ ಇದ್ದಲ್ಲಿ ಪ್ರತ್ಯೇಕವಾಗಿ ಇರಲು ಕೋರಲಾಗಿದೆ.
ಉಸಿರಾಟದ ಸಮಸ್ಯೆ ಇದ್ದಲ್ಲಿ ತಕ್ಷಣವೇ ಸ್ಥಳೀಯ ಅಸ್ಪತ್ರೆಯಲ್ಲಿ ಆರೈಕೆ ಪಡೆಯಲು ಸೂಚಿಸಲಾಗಿದೆ. ಎಸಿ ಇರುವ ಒಳಾಂಗಣ ಪ್ರದೇಶ, ಹೆಚ್ಚಿನ ಜನಸಂದಣಿ ಇರುವ ಪ್ರದೇಶ, ಸಾರ್ವಜನಿಕ ಸ್ಥಳ, ಸಾರಿಗೆ, ಆರೋಗ್ಯ ಕೇಂದ್ರಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಲು ಸೂಚಿಸಲಾಗಿದೆ. ಹಬ್ಬಗಳನ್ನು ಹೊರಾಗಂಣದಲ್ಲಿ ಆಚರಿಸಲು ಕೋರಲಾಗಿದೆ. ಜನ ದಟ್ಟಣೆಯಿಂದ ದೂರವಿರಲು ತಿಳಿಸಲಾಗಿದೆ.
ಎಲ್ಲರೂ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಮನವಿ ಮಾಡಲಾಗಿದೆ. ಇತರ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಹಾಗೂ ಚಿಕಿತ್ಸೆಯಲ್ಲಿರುವವರು ವೈದ್ಯರ ಜೊತೆ ಸಮಾಲೋಚಿಸಿ ಬೂಸ್ಟರ್ ಡೋಸ್ ಲಸಿಕೆ ಪಡೆಯಲು ಸೂಚಿಸಲಾಗಿದೆ. ಸಾರ್ವಜನಿಕ ಪ್ರದೇಶದಲ್ಲಿ ಉಗುಳುವುದು ನಿಷೇಧಿಸಲಾಗಿದೆ. ಪಟಾಕಿ ಸಿಡಿಸುವುದರಿಂದ ದೂರವಿರಲು ಸೂಚಿಸಲಾಗಿದೆ.