ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹತ್ವದ ಬೆಳವಣಿಗೆಯೊಂದರಲ್ಲಿ ರಷ್ಯಾ ವಿದೇಶಾಂಗ ಸಚಿವ ಸೆರ್ಗಿ ಲಾವ್ರೊವ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಭೇಟಿ ನಡೆದಿದ್ದು, ಜಾಗತಿಕ ಮಟ್ಟದಲ್ಲಿ ಈ ಭೇಟಿ ವಿಶೇಷ ಕುತೂಹಲ ಮೂಡಿಸಿದೆ.
ರಷ್ಯಾ-ಉಕ್ರೇನ್ ಯುದ್ಧ ಕುರಿತಾಗಿ ನಿಲುವು ತೆಗೆದುಕೊಳ್ಳುವಂತೆ ಭಾರತದ ಮೇಲೆ ಅಂತಾರಾಷ್ಟ್ರೀಯ ಒತ್ತಡಗಳು ಇರುವ ನಡುವೆಯೇ ಉಭಯ ನಾಯಕರ ಸುಮಾರು 40 ನಿಮಿಷಗಳ ಕಾಲದ ಈ ಚರ್ಚೆ ಮಹತ್ವ ಪಡೆದುಕೊಂಡಿದೆ.
ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಯುದ್ಧ ಕೊನೆಗೊಳಿಸುವ ಬಗ್ಗೆ ಮಾತುಕತೆಗಳು ವೇಗ ಪಡೆದುಕೊಳ್ಳಬೇಕು, ಹಿಂಸಾಚಾರ ಕೊನೆಗೊಂಡು ಶಾಂತಿ ಮೂಡಿಸುವ ಎಲ್ಲಾ ಪ್ರಯತ್ನಗಳಿಗೆ ಯಾವುದೇ ರೀತಿಯಲ್ಲಿ ಕೊಡುಗೆ ನೀಡಲು ಭಾರತ ಸಿದ್ಧವಿದೆ ಎಂದು ಪ್ರಧಾನಿ ಪುನರುಚ್ಚರಿಸಿದ್ದಾರೆ ಎಂದು ಹೇಳಿದೆ.
ಇದೇ ಸಂದರ್ಭ ಪ್ರಧಾನಿ ಮೋದಿ ಅವರಿಗೆ ರಷ್ಯ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಂದ ವೈಯಕ್ತಿಕವಾಗಿ ಸಂದೇಶ ರವಾನಿಸಲು ತಾನು ಇಚ್ಚಿಸುವುದಾಗಿ ಲಾವ್ರೋವ್ ಹೇಳಿದ್ದಾರೆ.