ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮಂಗಳೂರು ನಗರದ ಬಿಕರ್ನಕಟ್ಟೆ ಕಂಡೆಟ್ಟು ಶ್ರೀ ಹರಿಹರ ಪಾಂಡುರಂಗ ವಿಠಲ ಭಜನಾ ಮಂದಿರ ಟ್ರಸ್ಟ್ 2025ಕ್ಕೆ ಶತಮಾನೋತ್ಸವ ಆಚರಿಸುತ್ತಿದ್ದು, ಇದರ ಪೂರ್ವಭಾವಿಯಾಗಿ ಜು.29 ಮತ್ತು 30ರಂದು ಶ್ರೀ ಪಾಂಡುರಂಗ ದೇವರಿಗೆ ಸಾಮೂಹಿಕ ಲಕ್ಷ ತುಳಸಿ ಅರ್ಚನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಜು.29ರಂದು ಬೆಳಗ್ಗೆ 6 ರಿಂದ ವೈದಿಕ ಕಾರ್ಯಕ್ರಮಗಳೊಂದಿಗೆ ಮಂದಿರದ ಪರಿಸರದಿಂದ ತುಳಸಿ ಸಂಗ್ರಹಿಸಲು ವಿಶಿಷ್ಠವಾಗಿ ತುಳಸಿ ಹೊರೆಕಾಣಿಕೆ ಕಾರ್ಯಕ್ರಮ ಭಜನೆಯೊಂದಿಗೆ ನಡೆಯಲಿದೆ. ಜು.30ರಂದು ಬೆಳಗ್ಗೆ 7ರಿಂದ ಮಧ್ಯಾಹ್ನ 12 ರವರೆಗೆ ಪಾಂಡುರಂಗ ದೇವರಿಗೆ ಸಾಮೂಹಿಕ ತುಳಸಿ ಅರ್ಚನೆ ನಡೆಯಲಿದ್ದು, ಭಕ್ತರು ಸ್ವತಃ ವಿಷ್ಣು ಸಹಸ್ರನಾಮದ ಪಠಣದೊಂದಿಗೆ ತಮ್ಮ ಕೈಯಿಂದಲೇ ತುಳಸಿ ದಳ ಅರ್ಚನೆ ಮಾಡಬಹುದು. ಕಾರ್ಯಕ್ರಮವು ಪುರೋಹಿತ ಸಚ್ಚಿದಾನಂದ ನಿಗ್ಲೆ ಅವರ ನೇತೃತ್ವದಲ್ಲಿ ನಡೆಯಲಿದೆ ಎಂದು ಹರಿಹರ ಪಾಂಡುರಂಗ ವಿಠಲ ಭಜನಾ ಮಂದಿರ ಟ್ರಸ್ಟ್ ಅಧ್ಯಕ್ಷ ಪ್ರೊ. ವಿ. ಜಯರಾಮ್ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲಕ್ಷ ತುಳಸಿ ಅರ್ಚನೆಯ ನಂತರ ಪಾಂಡುರಂಗ ರುಕುಮಾಯಿ ದೇವರ ಮಹಾಪೂಜೆ ನೆರವೇರಲಿದೆ. ಮಧ್ಯಾಹ್ನ ವಿದ್ವಾನ್ ಪಂಜ ಭಾಸ್ಕರ ಭಟ್ ಅವರಿಂದ ಲಕ್ಷ ತುಳಸಿ ಅರ್ಚನೆ ಬಗ್ಗೆ ಪ್ರವಚನ ಕಾರ್ಯಕ್ರಮ, ಮಹಾ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಮಾಣಿಲದ ಅರವಿಂದ ಆಚಾರ್ಯ ಮತ್ತು ತಂಡದಿಂದ ಭಜನ್ ಸಂಧ್ಯಾ ಕಾರ್ಯಕ್ರಮ, ರಂಗಪೂಜೆ, ಪ್ರಸಾದ ವಿತರಣೆ ನೆರವೇರಲಿದೆ. ಅರ್ಚನೆಯ ಬಳಿಕ ತುಳಸಿಯನ್ನು ಆಯುರ್ವೇದ ಆಸ್ಪತ್ರೆಗೆ ಔಷಧ ತಯಾರಿಗಾಗಿ ನೀಡಲಾಗುವುದು ಎಂದರು.