ಹೊಸ ದಿಗಂತ ವರದಿ, ಮಡಿಕೇರಿ:
ಕೊಡಗು ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಭೆ ನಡೆಯಿತು.
ಕೊಡಗು ಜಿಲ್ಲೆಯಲ್ಲಿ ಕನ್ನಡ ಭಾಷೆ ಬಾರದಿರುವವರು ಕನ್ನಡ ಭಾಷೆ ಕಲಿಯುವಂತಾಗಬೇಕು. ಆ ನಿಟ್ಟಿನಲ್ಲಿ ಗಡಿಭಾಗದಲ್ಲಿ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು.
ಯಾವುದೇ ಭಾಷೆಯಲ್ಲಿ ಮಾತನಾಡಿದರೂ ಸಹ ಪ್ರತಿಕ್ರಿಯೆಯನ್ನು ಕನ್ನಡದಲ್ಲಿಯೇ ನೀಡಿದಲ್ಲಿ ಮತ್ತೊಬ್ಬರು ಕನ್ನಡ ಭಾಷೆ ಕಲಿಯಲು ಸಹಕಾರಿಯಾಗಲಿದೆ. ಆ ನಿಟ್ಟಿನಲ್ಲಿ ಪ್ರಯತ್ನಗಳು ಮುಂದುವರೆಯಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಎಲ್ಲೆಡೆ ಕನ್ನಡದಲ್ಲಿ ನಾಮಫಲಕ ಇರುವ ಸಂಬಂಧ ಸರ್ಕಾರದ ನಿಯಮವನ್ನು ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಎಸ್.ಮಹೇಶ್ , ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಕನ್ನಡ ಭಾಷೆ ಬಳಕೆಗೆ ಮತ್ತಷ್ಟು ಜಾಗೃತಿ ಮೂಡಿಸುವಂತಾಗಬೇಕು. ನಿರೀಕ್ಷಿತ ಮಟ್ಟದಲ್ಲಿ ಕನ್ನಡ ಭಾಷೆ ಬಳಕೆ ಆಗಬೇಕು. ಜಿಲ್ಲೆಯ ಎಲ್ಲಾ ಅಂಗಡಿಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯವಾಗಿ ಪ್ರಥಮ ಆದ್ಯತೆಯಲ್ಲಿ ಬರೆಸಿರಬೇಕು ಎಂದರು.
ಕುಟ್ಟ, ಮಾಕುಟ್ಟ, ಕರಿಕೆ ಭಾಗದಲ್ಲಿ ರಸ್ತೆ ಬದಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಗಡಿ ಪ್ರವೇಶ, ತಾಲೂಕು, ಜಿಲ್ಲೆ, ರಾಜ್ಯ, ಕಿ.ಮೀ. ಮತ್ತಿತರ ಮಾಹಿತಿ ಒಳಗೊಂಡ ಫಲಕ ಅಳವಡಿಸುವಂತಾಗಬೇಕು ಎಂದು ಕೇಶವ ಕಾಮತ್ ಸಲಹೆ ಮಾಡಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನಾ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ರಂಜಿತಾ ಕಾರ್ಯಪ್ಪ, ಭಾರತಿ ರಮೇಶ್, ಇ.ರಾಜು ಅವರು ಕನ್ನಡ ಅನುಷ್ಠಾನ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು.
ಪ್ರಾಧಿಕಾರದ ಅಧ್ಯಕ್ಷರ ಭೇಟಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಜೂ. 22 ರಂದು ಕೊಡಗು ಜಿಲ್ಲೆಗೆ ಆಗಮಿಸಿ ಸೋಮವಾರಪೇಟೆಯಲ್ಲಿ ಕನ್ನಡ ಕಾಯಕ ವರ್ಷದ ಪ್ರಯುಕ್ತ ಜಿಲ್ಲಾ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ.ದರ್ಶನಾ ಅವರು ಮಾಹಿತಿ ನೀಡಿದರು.
ಸೋಮವಾರಪೇಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಮಡಿಕೇರಿಗೆ ಆಗಮಿಸಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಮಹೇಶ್, ಜಿ.ಪಂ.ಮುಖ್ಯ ಯೋಜನಾಧಿಕಾರಿ ರಾಜಗೋಪಾಲ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ವೇದಮೂರ್ತಿ, ಮಂಜುನಾಥ್ ಇದ್ದರು.