ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರದ ಬಂಡೀಪುರಕ್ಕೆ ಆಗಮಿಸುವ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಅರಣ್ಯ ಇಲಾಖೆಯು ನೂತನ ವಿಮಾ ಯೋಜನೆಯನ್ನು ಆರಂಭಿಸಿದೆ.ಸಫಾರಿ ವೇಳೆ ಪ್ರವಾಸಿಗರು ಕಾಡು ಪ್ರಾಣಿ ದಾಳಿಯಿಂದ ಮೃತಪಟ್ಟರೆ ಈ ಯೋಜನೆ ಅಡಿಯಲ್ಲಿ ಒಂದು ಕೋಟಿ ರೂಪಾಯಿ ಪರಿಹಾರ ದೊರೆಯಲಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಪ್ರವಾಸಿಗರ ಮೇಲೆ ಪ್ರಾಣಿಗಳು ದಾಳಿ ನಡೆಸುವುದು, ಅಟ್ಟಾಡಿಸಿಕೊಂಡು ಬರುವ ಘಟನೆಗಳು ನಡೆಯುತ್ತವೆ. ಈ ಹಿನ್ನೆಲೆ ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಬಂಡೀಪುರಕ್ಕೆ ಆಗಮಿಸುವ ಸಫಾರಿಗರಿಗೆ ಒಂದು ಕೋಟಿ ರೂ. ಮೊತ್ತದ ವಿಮಾ ಸೌಲಭ್ಯವನ್ನು ಅರಣ್ಯ ಇಲಾಖೆ ಕಲ್ಪಿಸಿದೆ.
ಬಂಡೀಪುರಕ್ಕೆ ಆಗಮಿಸುವ ಎಲ್ಲರಿಗೂ ಈ ವಿಮಾ ಸೌಲಭ್ಯ ಅನ್ವಯವಾಗಲಿದೆ. ಈ ಯೋಜನೆಗೆ ಅರ್ಹರಾಗಲು ಪ್ರತ್ಯೇಕ ನೋಂದಣಿ ಅಗತ್ಯ ಇಲ್ಲ. ಸಫಾರಿಗೆ ತೆರಳಿರುವ ಟಿಕೆಟ್ ಇದ್ದರೆ ಈ ವಿಮಾ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಕಾಡಿನೊಳಗೆ ಪ್ರಾಣ ಹಾನಿ ಸಂಭವಿಸಿದರೆ ಅರಣ್ಯ ಇಲಾಖೆಯಿಂದ ಆರ್ಥಿಕ ನೆರವು ಸಿಗಲಿದೆ ಎಂದು ಬಂಡೀಪುರ ಸಿಎಫ್ ರಮೇಶ್ ಕುಮಾರ್ ತಿಳಿಸಿದ್ದಾರೆ.
ಸಫಾರಿಗೆ ವೇಳೆ ಪ್ರಾಣ ಹಾನಿ ಸಂಭವಿಸಿದರೆ ಅಥವಾ ಸಫಾರಿ ವೇಳೆ ಕಾಡು ಪ್ರಾಣಿಗಳ ದಾಳಿಯಿಂದ ಮೃತಪಟ್ಟರೆ 1 ಕೋಟಿ ರೂಪಾಯಿ ಆರ್ಥಿಕ ನೆರವು ಸಿಗಲಿದೆ.