ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಉಗ್ರರ ಸಂಚಿಗೆ ಮತ್ತೊಂದು ದುರಂತ ಘಟನೆ ಸಂಭವಿಸಿದೆ. ಭದ್ರತಾ ಪಡೆಗಳ ವಾಹನವನ್ನು ಗುರಿಯಾಗಿಸಿಕೊಂಡು ನಡೆದ ಸ್ಫೋಟದಲ್ಲಿ ಅರೆಸೈನಿಕ ಸಿಬ್ಬಂದಿಯೊಬ್ಬರು ಸಾವನ್ನಪ್ಪಿ, 8 ಮಂದಿ ಗಾಯಗೊಂಡಿರುವ ಘಟನೆ ಪೇಶಾವರದಲ್ಲಿ ನಡೆದಿದೆ.
ಸೋಮವಾರ ಬೆಳಗ್ಗೆ 10:30ಕ್ಕೆ ಖೈಬರ್ ಪಖ್ತುಂಖ್ವಾ ಫ್ರಾಂಟಿಯರ್ ಕಾನ್‌ಸ್ಟಾಬ್ಯುಲರಿ (ಎಫ್‌ಸಿ) ಮಹಮದನ್ ರೈಫಲ್ಸ್ ರೆಜಿಮೆಂಟ್‌ಗೆ ಸೇರಿದ ವಾಹನದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ವಾಹನವು ಮಚ್ನಿಯಿಂದ ಪೇಶಾವರ ಕಡೆಗೆ ಹೊರಟಿರುವ ಸಂದರ್ಭದಲ್ಲಿ ಸುಧಾರಿತ ಸ್ಫೋಟಕ ಸಾಧನ ಬಳಸಿ ಬಾಸ್ಟ್ ಮಾಡಲಾಗಿದೆ ಎಂದು ಅಲ್ಲಿನ ಎಸ್ಪಿ ಹೇಳಿದ್ದಾರೆ. ಸ್ಫೋಟದಿಂದಾಗಿ ವಾಹನವು ಸಂಪೂರ್ಣವಾಗಿ ಹಾನಿಗೊಳಗಾಗಿರುವುದನ್ನು ದೃಶ್ಯಗಳು ತೋರಿಸುತ್ತವೆ.
ಕ್ಷಣಾರ್ಧದಲ್ಲಿ ಪ್ರದೇಶ ಪೂರ್ತಿ ರಕ್ತಸಿಕ್ತವಾಯಿತು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಸ್ಥಳದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ಭಯೋತ್ಪಾದಕ ಸಂಘಟನೆ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ದಾಳಿಯ ಹೊಣೆ ಹೊತ್ತುಕೊಂಡಿದೆ.
ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಮಾಲಿ ಖೇಲ್ ಪ್ರದೇಶದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ 9 ಭದ್ರತಾ ಸಿಬ್ಬಂದಿ ಸಾವನ್ನಪ್ಪಿದರು ಮತ್ತು 17 ಮಂದಿ ಗಾಯಗೊಂಡ ಕೆಲವು ದಿನಗಳಲ್ಲೇ ಪೇಶಾವರದಲ್ಲಿ ಸ್ಫೋಟ ಸಂಭವಿಸಿದೆ.