ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಬಾದ್ ಷಾ ಎಂದು ಕರೆಯಲ್ಪಡುವ ನಟ ಶಾರುಖ್ ಖಾನ್ ಅವರಿಗೆ ಈ ವರ್ಷ ತುಂಬಾನೇ ಸ್ಪೆಷಲ್. ‘ಜವಾನ್’ ಸಿನಿಮಾದಲ್ಲಿ ತೋರಿಸಿದ ನಟನೆಗೆ ಅವರಿಗೆ ರಾಷ್ಟ್ರೀಯ ಪ್ರಶಸ್ತಿಯ ಅತ್ಯುತ್ತಮ ನಟ (Best Actor) ಗೌರವ ಲಭಿಸಿದೆ. ಆದರೆ ಇದೇ ಸಮಯದಲ್ಲಿ ಅವರು ಕೈಗೆ ಪೆಟ್ಟಾಗಿದ್ದು, ಶಸ್ತ್ರಚಿಕಿತ್ಸೆಗೂ ಒಳಗಾಗಬೇಕಾಯಿತು. ಆದರೂ ಸಿನಿಮಾ ಸಂಬಂಧಿತ ಕಾರ್ಯಗಳಲ್ಲಿ ಅವರು ಸಕ್ರಿಯರಾಗಿರುವುದು ಅಭಿಮಾನಿಗಳಿಗೆ ಮತ್ತಷ್ಟು ಸ್ಪೂರ್ತಿಯಾಗಿದೆ.
ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ನಿರ್ದೇಶನ ಮಾಡಿರುವ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ ಸಿರೀಸ್ ಬಿಡುಗಡೆಗೆ ಸಜ್ಜಾಗಿದೆ. ಅದರ ಪ್ರೀವ್ಯೂ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಅವರು ರಾಷ್ಟ್ರ ಪ್ರಶಸ್ತಿ ಹಾಗೂ ತಮ್ಮ ಆರೋಗ್ಯ ಸ್ಥಿತಿ ಬಗ್ಗೆ ಮಾತನಾಡಿದರು. ಬ್ಯಾಂಡೇಜ್ ಕಟ್ಟಿಕೊಂಡೇ ವೇದಿಕೆಗೆ ಬಂದ ಅವರು, “ನನ್ನ ಕೈಗೆ ಗಾಯವಾಗಿದ್ದು ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಸಂಪೂರ್ಣವಾಗಿ ಗುಣಮುಖರಾಗಲು ಇನ್ನೂ 1-2 ತಿಂಗಳು ಬೇಕು. ಆದರೆ ರಾಷ್ಟ್ರ ಪ್ರಶಸ್ತಿ ಸ್ವೀಕರಿಸಲು ಒಂದೇ ಕೈ ಸಾಕು” ಎಂದು ಹಾಸ್ಯಮಿಶ್ರಿತ ಉತ್ತರ ನೀಡಿದರು.
ಆರ್ಯನ್ ಖಾನ್ ನಿರ್ದೇಶನದ ಮೊದಲ ಪ್ರಾಜೆಕ್ಟ್ ‘ಬ್ಯಾಡ್ಸ್ ಆಫ್ ಬಾಲಿವುಡ್’ ವೆಬ್ಸಿರೀಸ್ ಅನ್ನು ಸ್ವತಃ ಶಾರುಖ್ ಖಾನ್ ಅವರೇ ನಿರ್ಮಿಸಿದ್ದಾರೆ. “ನಾನು ಸಾಮಾನ್ಯವಾಗಿ ತಿನ್ನುವುದು, ಹಲ್ಲು ಉಜ್ಜುವುದು, ಕೆಲಸ ಮಾಡುವುದನ್ನು ಒಂದೇ ಕೈಯಲ್ಲಿ ಮಾಡುತ್ತೇನೆ. ಆದರೆ ನಿಮ್ಮಿಂದ ಸಿಗುವ ಪ್ರೀತಿ ಸ್ವೀಕರಿಸಲು ಎರಡು ಕೈಗಳು ಬೇಕು” ಎಂದು ಅಭಿಮಾನಿಗಳಿಗೆ ಹೇಳಿದ್ದಾರೆ.
ಇದೀಗ ಶಾರುಖ್ ಖಾನ್ ಅವರ ಕೈಗೆ ಗಾಯವಾದ ಕಾರಣ ‘ಕಿಂಗ್’ ಚಿತ್ರದ ಶೂಟಿಂಗ್ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಆದರೆ ಅಭಿಮಾನಿಗಳು ಅವರು ಶೀಘ್ರ ಗುಣಮುಖರಾಗಿ ಮತ್ತೆ ಚಿತ್ರೀಕರಣ ಶುರುವಾಗಲಿದೆ ಎಂದು ನಿರೀಕ್ಷಿಸುತ್ತಿದ್ದಾರೆ.