ಹೊಸದಿಗಂತ ಡಿಜಿಟಲ್ ಡೆಸ್ಕ್;
ಕೇರಳ ವಿಧಾನಸಭೆಯು ಗುರುವಾರ ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವನೆ ಸಂವಿಧಾನ ವಿರೋಧಿ ಎಂದು ಟೀಕಿ ತಿರಸ್ಕರಿಸಲು ಸರ್ವಾನುಮತದಿಂದ ನಿರ್ಣಯ ಅಂಗೀಕರಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಎಂ.ಬಿ.ರಾಜೇಶ್ ಮಂಡಿಸಿದ ನಿರ್ಣಯದಲ್ಲಿ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿ ಸಲ್ಲಿಸಿದ ಪ್ರಸ್ತಾವನೆಯನ್ನು ತಿರಸ್ಕರಿಸಲಾಗಿದೆ. ಇದು ‘ಪ್ರಜಾಪ್ರಭುತ್ವ ವಿರೋಧಿ ಮನಸ್ಥಿತಿ’ಯನ್ನು ಪ್ರತಿಬಿಂಬಿಸುತ್ತದೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಮತ್ತು ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಹೇಳಿದೆ.
‘ಈ ಪ್ರಸ್ತಾವನೆಯನ್ನು ದೇಶದ ಸಾಮಾಜಿಕ-ಸಾಂಸ್ಕೃತಿಕ ಮತ್ತು ರಾಜಕೀಯ ವೈವಿಧ್ಯತೆಯನ್ನು ನಾಶಮಾಡುವ ಕೆಟ್ಟ ತಂತ್ರವೆಂದು ಪರಿಗಣಿಸಲಾಗಿದೆ’ ಎಂದು ನಿರ್ಣಯ ಹೇಳಿದೆ.
ಕೋವಿಂದ್ ನೇತೃತ್ವದ ಸಮಿತಿಯು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಪ್ರಸ್ತಾಪಿಸಿದೆ.ಪ್ರಸ್ತಾವನೆಯನ್ನು ಜಾರಿಗೊಳಿಸಿದರೆ ಅಧಿಕಾರ ಕೇಂದ್ರೀಕರಿಸಿ ಆರೆಸ್ಸೆಸ್ ಮತ್ತು ಬಿಜೆಪಿಯ ಅಜೆಂಡಾದ ಪ್ರಕಾರ ಏಕೀಕೃತ ಆಡಳಿತಕ್ಕೆ ಕಾರಣವಾಗುತ್ತದೆ ಎಂದು ನಿರ್ಣಯವು ಆರೋಪಿಸಿದೆ.
‘ಪ್ರಸ್ತಾವನೆಯು ಅನುಷ್ಠಾನಗೊಂಡರೆ, ರಾಜ್ಯ ಶಾಸಕಾಂಗ ಸಭೆಗಳ ಅಧಿಕಾರ ಮೊಟಕುಗೊಳಿಸುತ್ತದೆ ಮತ್ತು ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಸರ್ಕಾರಗಳಾಗಿ ಕಾರ್ಯನಿರ್ವಹಿಸುವುದಿಲ್ಲ. ಆ ಮೂಲಕ ಅಧಿಕಾರದ ವಿಕೇಂದ್ರೀಕರಣಕ್ಕೆ ಅಡ್ಡಿಪಡಿಸುತ್ತದೆ ಮತ್ತು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ನಿರಾಕರಿಸುತ್ತದೆ’ ಎಂದು ನಿರ್ಣಯ ಹೇಳಿದೆ.