ಹೊಸದಿಗಂತ ಡಿಜಿಟಲ್ ಡೆಸ್ಕ್:
ಒಂದು ರಾಷ್ಟ್ರ ಒಂದು ಚುನಾವಣೆ ನೀತಿ, ಒಂದು ರಾಷ್ಟ್ರ ಒಂದು ಪಡಿತರ ಚೀಟಿ ಎಂಬ ಯೋಜನೆಗಳ ಬೆನ್ನಲ್ಲೇ ಇದೀಗ ಪ್ರಧಾನಿ ನರೇಂದ್ರ ಮೋದಿ ಪೊಲೀಸರಿಗೆ ಒಂದು ರಾಷ್ಟ್ರ ಒಂದು ಸಮವಸ್ತ್ರ ನೀತಿ ಜಾರಿಗೆ ತಂದರೆ ಉತ್ತಮ ಎಂದು ಹೇಳಿದ್ದಾರೆ.
ಸೂರಜ್ ಕುಂಡ್ ನಲ್ಲಿ ನಡೆಯುತ್ತಿರುವ ರಾಜ್ಯ ಗೃಹ ಸಚಿವರ ಚಿಂತನ್ ಶಿಬಿರ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಪೊಲೀಸರಿಗೆ ಒಂದು ದೇಶ, ಒಂದು ಸಮವಸ್ತ್ರ ನೀತಿ ಜಾರಿಗೆ ತರಬೇಕು ಎಂಬ ನಿಟ್ಟಿನಲ್ಲಿ ಸಲಹೆ ನೀಡಿದರು. ಇದು ನನ್ನ ಸಲಹೆಯಷ್ಟೆ. ಆದರೆ ಪೊಲೀಸ್ ಯುನಿಫಾರ್ಮ್ ವಿಚಾರ ಆಯಾ ರಾಜ್ಯಗಳಿಗೆ ಬಿಟ್ಟ ವಿಚಾರ ಎಂದರು.
ಪೊಲೀಸರಿಗೆ ಒಂದು ರಾಷ್ಟ್ರ ಒಂದು ಸಮವಸ್ತ್ರ ಇದೊಂದು ಆಲೋಚನೆ. ಅದನ್ನು ನಾನು ರಾಜ್ಯಗಳ ಮೇಲೆ ಹೇರುವುದಿಲ್ಲ. ಆದರೆ ಯೋಚಿಸಿ ಜಾರಿಗೆ ತಂದರೆ ಅಸಾಧ್ಯವೇನೂ ಅಲ್ಲ. ದೇಶಾದ್ಯಂತ ಪೊಲೀಸರ ಸಮವಸ್ತ್ರ ಒಂದೇ ರೀತಿಯಲ್ಲಿದ್ದರೆ ಉತ್ತಮ ಎಂಬುದು ನನ್ನ ಆಲೋಚನೆ ಎಂದು ಹೇಳಿದರು.