ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ (CJP) ನೇತೃತ್ವದಲ್ಲಿ ನಡೆದ ‘ಸಂಸದ್ ಚಲೋ’ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಬಲಪ್ರಯೋಗದ ವಿಚಾರ ಸಂಸತ್ತಿನಲ್ಲಿ ಭಾರಿ ಸದ್ದಾಗಿದೆ. ರಾಜ್ಯಸಭೆಯಲ್ಲಿ ಈ ವಿಷಯವು ಆಡಳಿತಾರೂಢ ಎನ್‌ಡಿಎ ಮತ್ತು ವಿಪಕ್ಷಗಳ ನಡುವೆ ಬಿಸಿಬಿಸಿ ಚರ್ಚೆಗೆ ಕಾರಣವಾಯಿತು.
ರಾಜಕೀಯ ಲಾಭಕ್ಕೆ ಪೊಲೀಸ್ ಕಾರ್ಯಾಚರಣೆ ಬಳಸುವುದು ತಪ್ಪು: ಜೆಪಿ ನಡ್ಡಾ
ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಪೊಲೀಸರ ಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. “ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಪೊಲೀಸರ ಮೂಲಭೂತ ಜವಾಬ್ದಾರಿ. ವಿದ್ಯಾರ್ಥಿ ಚಳವಳಿಯಲ್ಲಿ ಭಾಗವಹಿಸುವವರು ಬಂಧನ ಅಥವಾ ಪೊಲೀಸ್ ಕ್ರಮಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಿರಬೇಕು” ಎಂದು ಅವರು ಸ್ಪಷ್ಟಪಡಿಸಿದರು.
ತಮ್ಮ ವಿದ್ಯಾರ್ಥಿ ಜೀವನದ ಉದಾಹರಣೆ ನೀಡಿದ ನಡ್ಡಾ, ತುರ್ತು ಪರಿಸ್ಥಿತಿಯ ಅವಧಿಯಲ್ಲಿ ತಾವೂ ಕೂಡ ವಿದ್ಯಾರ್ಥಿ ನಾಯಕನಾಗಿ ಎರಡು ಬಾರಿ ತರಗತಿಯಿಂದಲೇ ಬಂಧನಕ್ಕೊಳಗಾಗಿದ್ದನ್ನು ನೆನಪಿಸಿಕೊಂಡರು. ಸಾರ್ವಜನಿಕ ಆಸ್ತಿಗೆ ಹಾನಿಯಾಗದಂತೆ ತಡೆಯಲು ಕೈಗೊಂಡ ಕ್ರಮವನ್ನು ರಾಜಕೀಯಗೊಳಿಸಬಾರದು ಎಂದರು.



