ಹೊಸದಿಗಂತ ಹಾವೇರಿ:
ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಹಿರೇಯಡಚಿ ಮತ್ತು ಕ್ಯಾತನಕೇರಿ ಗ್ರಾಮಗಳ ನಡುವೆ ದೇವಸ್ಥಾನದ ಹಕ್ಕಿಗಾಗಿ ನಡೆದ ಜಗಳ ವಿಕೋಪಕ್ಕೆ ತಿರುಗಿದ್ದು, ಕಲ್ಲು ತೂರಾಟ ಮತ್ತು ವಾಹನಗಳ ಧ್ವಂಸಕ್ಕೆ ಸಾಕ್ಷಿಯಾಗಿದೆ. ಘಟನೆಯಲ್ಲಿ 9ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಹಿರೇಕೆರೂರು ಪೊಲೀಸರು 11 ಜನರನ್ನು ವಶಕ್ಕೆ ಪಡೆದಿದ್ದಾರೆ.
ಹಿರೇಯಡಚಿ ಹಾಗೂ ಕ್ಯಾತನಕೇರಿ ಗ್ರಾಮಗಳ ನಡುವಿನ ಗುಡ್ಡದ ಮೇಲಿರುವ ದುರ್ಗಮ್ಮ ದೇವಸ್ಥಾನವು ಈ ವಿವಾದದ ಕೇಂದ್ರಬಿಂದು. ಈ ದೇವಸ್ಥಾನವು ತಮ್ಮ ಗ್ರಾಮಕ್ಕೆ ಸೇರಿದ್ದೆಂದು ದಶಕಗಳಿಂದ ಎರಡೂ ಗ್ರಾಮಗಳ ನಡುವೆ ಶೀತಲ ಸಮರವಿತ್ತು. ಇತ್ತೀಚೆಗೆ ಹಿರೇಯಡಚಿ ಗ್ರಾಮಸ್ಥರು ಹಳೆಯ ದೇವಸ್ಥಾನದ ಪಕ್ಕದಲ್ಲೇ ಹೊಸ ದೇವಸ್ಥಾನ ನಿರ್ಮಾಣಕ್ಕೆ ಮುಂದಾಗಿ, ಜಾತ್ರೆಗಾಗಿ ಮಂಟಪ ನಿರ್ಮಿಸಲು ಜೆಸಿಬಿ ಮೂಲಕ ಕಾಮಗಾರಿ ಆರಂಭಿಸಿದ್ದರು.
ತಮ್ಮ ಒಪ್ಪಿಗೆ ಪಡೆಯದೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಕ್ಯಾತನಕೇರಿ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಾತಿಗೆ ಮಾತು ಬೆಳೆದು ಉಭಯ ಗ್ರಾಮಗಳ ನಡುವೆ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ನಡೆದ ಕಲ್ಲು ತೂರಾಟದಲ್ಲಿ ಒಂದು ಜೆಸಿಬಿ ಹಾಗೂ 10ಕ್ಕೂ ಹೆಚ್ಚು ಬೈಕ್‌ಗಳು ಜಖಂಗೊಂಡಿವೆ. ದಾಳಿಯಲ್ಲಿ ಹಿರೇಯಡಚಿ ಗ್ರಾಮದ 9 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಹಿರೇಕೆರೂರು ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ದೇವಸ್ಥಾನದ ಸುತ್ತ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಎರಡೂ ಗ್ರಾಮದ ಜನರು ಗುಡ್ಡದ ಕಡೆಗೆ ಬರದಂತೆ ನಿಷೇಧ ಹೇರಲಾಗಿದೆ.
ಈ ಸಂಬಂಧ 22ಕ್ಕೂ ಹೆಚ್ಚು ಜನರ ಮೇಲೆ ದೂರು ದಾಖಲಾಗಿದ್ದು, ಈಗಾಗಲೇ 11 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯ ಸತ್ಯಾಸತ್ಯತೆ ತಿಳಿಯಲು ಗ್ರಾಮಸ್ಥರ ಮೊಬೈಲ್ ರೆಕಾರ್ಡಿಂಗ್‌ಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಸದ್ಯ ಗ್ರಾಮಗಳಲ್ಲಿ ಬಿಗುವಿನ ವಾತಾವರಣವಿದ್ದರೂ ಶಾಂತಿ ನೆಲೆಸಿದೆ.



