April 16, 2026
Thursday, April 16, 2026
spot_img

ಅಂಬಾನಿಗೂ ಒಂದೇ ಮತ, ಬಡವರಿಗೂ ಒಂದೇ ಮತ: ಕಾಂಗ್ರೆಸ್ ವಿರುದ್ಧ ಗುಡುಗಿದ ತೇಜಸ್ವಿ ಸೂರ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆಯನ್ನಿಟ್ಟಿದೆ. ಇದಕ್ಕಾಗಿ ಕ್ಷೇತ್ರ ಪುನರ್‌ವಿಂಗಡಣೆ ಪ್ರಕ್ರಿಯೆ ನಡೆಸಲು ಸಂವಿಧಾನದ 131ನೇ ತಿದ್ದುಪಡಿ ಮಸೂದೆಯನ್ನು ಮಂಡಿಸಲಾಗಿದೆ.

ಸಂವಿಧಾನದ 82 ಮತ್ತು 170ನೇ ವಿಧಿಯ ಪ್ರಕಾರ, ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಯುವ ಜನಗಣತಿಯ ಆಧಾರದ ಮೇಲೆ ಚುನಾವಣಾ ಕ್ಷೇತ್ರಗಳ ಗಡಿಗಳನ್ನು ಮರುನಿರ್ಧರಿಸಬೇಕಾಗುತ್ತದೆ. ಜನಸಂಖ್ಯೆಗೆ ಅನುಗುಣವಾಗಿ ಸಮಾನ ಪ್ರಾತಿನಿಧ್ಯ ನೀಡುವುದು ಈ ಪ್ರಕ್ರಿಯೆಯ ಮೂಲ ಉದ್ದೇಶ.

ಈ ಪ್ರಕ್ರಿಯೆಯಿಂದ ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ರಾಜಕೀಯ ಬಲ ಕುಸಿಯಲಿದೆ ಮತ್ತು ಅನ್ಯಾಯವಾಗಲಿದೆ ಎಂಬ ಚರ್ಚೆಗಳು ಆರಂಭವಾಗಿವೆ. ಆದರೆ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವ ಅಮಿತ್ ಶಾ ಹಾಗೂ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಈ ವಾದವನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.

ಕ್ಷೇತ್ರ ಪುನರ್ವಿಂಗಡಣೆ ವಿಷಯವಾಗಿ ಸದನದಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ವಿರೋಧ ಪಕ್ಷಗಳ ನಿಲುವನ್ನು ತೀವ್ರವಾಗಿ ಟೀಕಿಸಿದರು. “ವಿಪಕ್ಷಗಳ ವಾದ ಹೇಗಿದೆಯೆಂದರೆ, ಶ್ರೀಮಂತರಿಗೆ ಹೆಚ್ಚು ಮತಗಳು ಹಾಗೂ ಬಡವರಿಗೆ ಕಡಿಮೆ ಮತಗಳು ಇರಬೇಕು ಎನ್ನುವಂತಿದೆ. ಮುಕೇಶ್ ಅಂಬಾನಿಯಂತಹ ಶ್ರೀಮಂತರಿಗೆ ಒಂದು ಲಕ್ಷ ಮತಗಳು ಹಾಗೂ ಸಾಮಾನ್ಯರಿಗೆ ಕೇವಲ ಒಂದು ಮತವಿರಬೇಕೆಂಬುದು ಕಾಂಗ್ರೆಸ್‌ನ ತರ್ಕವೇ?” ಎಂದು ಪ್ರಶ್ನಿಸಿದರು. ವಿರೋಧ ಪಕ್ಷಗಳ ಇಂತಹ ತರ್ಕಹೀನ ಚರ್ಚೆಗಳು ರಾಜಕೀಯ ಪ್ರೇರಿತ ಮತ್ತು ದೋಷಪೂರಿತ ಎಂದು ಕಿಡಿಕಾರಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !