ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರವು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಆನ್‌ಲೈನ್ ಬೆಟ್ಟಿಂಗ್ ಮತ್ತು ಜೂಜಾಟವನ್ನು ನಿಷೇಧಿಸಲು ಕರ್ನಾಟಕ ಪೊಲೀಸ್ ಕಾಯ್ದೆ, 1963 ಗೆ ತಿದ್ದುಪಡಿ ತರಲು ಮುಂದಾಗಿದೆ.
ಮಸೂದೆಯು ಕಾಯ್ದೆಯಾಗಿ ಮಾರ್ಪಟ್ಟರೆ, ಅದೃಷ್ಟ, ರ್ಯಾಂಡಮ್ ಅಥವಾ ಅನಿಶ್ಚಿತತೆ ಫಲಿತಾಂಶವನ್ನು ನಿರ್ಧರಿಸುವ ಯಾವುದೇ ಗೇಮ್, ಸ್ಪರ್ಧೆ ಅಥವಾ ಚಟುವಟಿಕೆಗಳು ಆನ್‌ಲೈನ್ ಜೂಜಾಟ, ಬೆಟ್ಟಿಂಗ್ ಮತ್ತು ಪಂಥದಂತಹ ಆಟಗಳಿಗೆ ಕಡಿವಾಣ ಹಾಕುತ್ತದೆ.
ಕರಡು ಮಸೂದೆಯ ಪ್ರಕಾರ, ಇಂಟರ್ನೆಟ್, ಮೊಬೈಲ್ ಅಪ್ಲಿಕೇಶನ್‌ಗಳು ಅಥವಾ ಇತರ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೂಲಕ ನಡೆಸಲಾಗುವ ಪಂದ್ಯ ಅಥವಾ ಚಟುವಟಿಕೆಯ ಫಲಿತಾಂಶದ ಮೇಲೆ ಹಣ, ಟೋಕನ್‌ಗಳು, ವರ್ಚುವಲ್ ಕರೆನ್ಸಿ ಅಥವಾ ಎಲೆಕ್ಟ್ರಾನಿಕ್ ನಿಧಿಗಳ ಪಣತೊಡುವುದು ಅಥವಾ ಪಣಕ್ಕಿಡುವ ಯಾವುದೇ ರೂಪದಲ್ಲಿ ಆನ್‌ಲೈನ್ ಬೆಟ್ಟಿಂಗ್ ನ್ನು ಇದು ನಿಷೇಧಿಸುತ್ತದೆ.
ಕೌಶಲ್ಯದ ಆಟಕ್ಕೆ ಈ ಮಸೂದೆಯಡಿ ವಿನಾಯ್ತಿ ನೀಡಲಾಗುತ್ತದೆ. ಯಾವುದೇ ಆಟ, ಸ್ಪರ್ಧೆ ಅಥವಾ ಚಟುವಟಿಕೆಯಲ್ಲಿ ಫಲಿತಾಂಶವು ಭಾಗವಹಿಸುವವರ ಕೌಶಲ್ಯ, ಜ್ಞಾನ, ತರಬೇತಿ ಅಥವಾ ಪರಿಣತಿಯಿಂದ ನಿರ್ಧರಿಸಲ್ಪಡುವುದಿದ್ದರೆ ಅದಕ್ಕೆ ಅವಕಾಶವಿದೆ.
ರಾಜ್ಯ ಸರ್ಕಾರ ಅಥವಾ ಗೊತ್ತುಪಡಿಸಿದ ಪ್ರಾಧಿಕಾರವು ನಿರ್ಧರಿಸಿದಂತೆ ಕೌಶಲ್ಯದ ಆಟಗಳು, ನಿಯಂತ್ರಣ ಮತ್ತು ಪರವಾನಗಿಗೆ ಒಳಪಟ್ಟು ನಿಷೇಧದಿಂದ ವಿನಾಯಿತಿ ಪಡೆಯುತ್ತವೆ ಎಂದು ಮಸೂದೆ ಸ್ಪಷ್ಟಪಡಿಸಿದೆ.