ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಆನ್‌ಲೈನ್ ಗೇಮಿಂಗ್ ನಿಯಂತ್ರಣ ಮಸೂದೆಯನ್ನು ಸಂಸತ್ತು ಅಂಗೀಕರಿಸಿದ್ದು, ಇದರಿಂದ ಕ್ರೀಡಾ ಪ್ರಾಯೋಜಕತ್ವದ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಬಹುದೆಂಬ ಆತಂಕ ಮೂಡಿದೆ. ವಿಶೇಷವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI)ಗೆ ಇದು ಆರ್ಥಿಕ ನಷ್ಟವನ್ನು ಉಂಟುಮಾಡುವ ಸಾಧ್ಯತೆ ಹೆಚ್ಚಿದೆ.
ಈಗ ಟೀಮ್ ಇಂಡಿಯಾದ ಅಧಿಕೃತ ಜೆರ್ಸಿ ಪ್ರಾಯೋಜಕರಾಗಿರುವ ಡ್ರೀಮ್ 11 (Dream11), ಹೊಸ ಕಾನೂನು ಜಾರಿಯಾಗಿ ತನ್ನ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕಾಗಿದೆ. ಇದರಿಂದಾಗಿ ಮುಂದಿನ ತಿಂಗಳು ಯುಎಇಯಲ್ಲಿ ಆರಂಭವಾಗಲಿರುವ ಏಷ್ಯಾ ಕಪ್ 2025ರಲ್ಲಿ ಟೀಮ್ ಇಂಡಿಯಾ ಜೆರ್ಸಿ ಪ್ರಾಯೋಜಕರಿಲ್ಲದೆ ಮೈದಾನಕ್ಕಿಳಿಯಲಿದೆ.
ನಗದು ಒಳಗೊಂಡ ಆನ್‌ಲೈನ್ ಆಟಗಳನ್ನು ನಿಷೇಧಿಸುವ ಗುರಿಯೊಂದಿಗೆ ಈ ಮಸೂದೆಯನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಗಿದೆ. ಹೊಸ ಕಾನೂನಿನ ಪ್ರಕಾರ, ಹಣದ ಆಟಗಳನ್ನು ನಡೆಸುವವರಿಗೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಅಥವಾ 1 ಕೋಟಿ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ.
ಫ್ಯಾಂಟಸಿ ಗೇಮಿಂಗ್ ಕಂಪನಿಗಳು ವರ್ಷಕ್ಕೆ 5,000 ಕೋಟಿವರೆಗೆ ಕ್ರೀಡಾ ಪ್ರಾಯೋಜಕತ್ವ ಮತ್ತು ಜಾಹೀರಾತಿಗೆ ಖರ್ಚು ಮಾಡುತ್ತವೆ. ಕ್ರಿಕೆಟ್ ಸೇರಿದಂತೆ ಹಲವು ಕ್ರೀಡಾಂಗಣಗಳಿಗೆ ಅವರು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುತ್ತಿದ್ದರು. ಹೊಸ ಮಸೂದೆ ಜಾರಿಯಾಗಿದ್ದು ಈ ಆದಾಯದ ಮಾರ್ಗವೇ ಸಂಪೂರ್ಣವಾಗಿ ಕಡಿದು ಹೋಗಲಿದೆ.
ಡ್ರೀಮ್ 11 ಪ್ರಸ್ತುತ 2023ರಿಂದ 2026ರವರೆಗೆ ಬಿಸಿಸಿಐ ಜೊತೆ 358 ಕೋಟಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿತ್ತು. ಪ್ರತೀ ವರ್ಷ ಸರಾಸರಿ 119.33 ಕೋಟಿ ಪಾವತಿಸುತ್ತಿತ್ತು. ಆದರೆ ಈಗ ಈ ಒಪ್ಪಂದ ತೊಂದರೆಯಲ್ಲಿದೆ. ಬಿಸಿಸಿಐ ಹೊಸ ಪ್ರಾಯೋಜಕರಿಗಾಗಿ ಹುಡುಕಾಟ ಆರಂಭಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಸಿಸಿಐ ಸ್ಪಷ್ಟನೆ
ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಪ್ರತಿಕ್ರಿಯೆ ನೀಡಿದ್ದು, “ದೇಶದ ಯಾವುದೇ ಕಾನೂನುಗಳನ್ನು ಉಲ್ಲಂಘಿಸುವ ಕೆಲಸವನ್ನು ಬಿಸಿಸಿಐ ಮಾಡುವುದಿಲ್ಲ. ಮಸೂದೆಯನ್ನು ರಾಷ್ಟ್ರಪತಿ ಅನುಮೋದಿಸಿದ ನಂತರ ಜಾರಿಗೆ ಬರುವ ದಿನಾಂಕದಂತೆ ಕ್ರಮ ಕೈಗೊಳ್ಳಲಾಗುವುದು,” ಎಂದು ಹೇಳಿದ್ದಾರೆ.