ಇನ್ಮುಂದೆ ಚಾರಣ ಪಥಗಳಿಗೆ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್: ಸಚಿವ ಈಶ್ವರ ಖಂಡ್ರೆ

ಹೊಸದಿಗಂತ ವರದಿ, ಮಂಗಳೂರು:

ರಾಜ್ಯದ ವಿವಿಧ ಚಾರಣ ಪಥಗಳಿಗೆ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಆನ್‌ಲೈನ್ ಬುಕ್ಕಿಂಗ್‌ಗಾಗಿ ಒಂದೇ ವೆಬ್‌ಸೈಟ್‌ನಲ್ಲಿ ಅವಕಾಶ ನೀಡಲಾಗುತ್ತಿದ್ದು, ಅದರ ಸಾಫ್ಟ್‌ವೇರ್ ಜು.೧೫ರೊಳಗೆ ತಯಾರಾಗಲಿದೆ. ನಂತರ ಅತಿ ಶೀಘ್ರ ಬುಕ್ಕಿಂಗ್ ಪುನರಾರಂಭ ಮಾಡಲಾಗುವುದು ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಬುಕ್ಕಿಂಗ್‌ಗೆ ಒಂದೇ ವೆಬ್‌ಸೈಟ್ ಆಗಿರುವುದರಿಂದ ಒಂದು ಚಾರಣ ಪಥದಲ್ಲಿ ಟಿಕೆಟ್ ಸಿಗದಿದ್ದರೆ ಮತ್ತೊಂದಕ್ಕೆ ಟಿಕೆಟ್ ಕಾಯ್ದಿರಿಸುವ ಅವಕಾಶವೂ ಇರಲಿದೆ. ಕಳೆದ ಜನವರಿಯಲ್ಲಿ ಸುಬ್ರಹ್ಮಣ್ಯದ ಕುಮಾರಪರ್ವತ ಸಹಿತ ಕೆಲವು ಚಾರಣ ಪ್ರದೇಶಗಳಿಗೆ ಸಾವಿರಾರು ಚಾರಣಿಗರು ಒಂದೇ ದಿನ ಆಗಮಿಸಿ ಗೊಂದಲ ಉಂಟಾಗಿ ದೂರು ಬಂದ ಹಿನ್ನೆಲೆಯಲ್ಲಿ ಚಾರಣವನ್ನೇ ಸ್ಥಗಿತಗೊಳಿಸಲಾಗಿತ್ತು. ಇದೀಗ, ಪ್ರತಿ ಚಾರಣ ಪಥದಲ್ಲೂ ಅದರ ವಿಸ್ತಾರ, ಇತರ ಮೂಲಭೂತ ಸೌಲಭ್ಯಗಳನ್ನು ಗಮನದಲ್ಲಿಟ್ಟುಕೊಂಡು, ಪರಿಸರದ ಕಾಳಜಿಯೊಂದಿಗೆ ಚಾರಣಿಗರ ಸಂಖ್ಯೆಗೆ ಮಿತಿ ವಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ಈಗಾಗಲೇ ರಾಜ್ಯದ ಕೆಲವು ಚಾರಣ ಪಥಗಳನ್ನು ಪರಿಸರ ಪ್ರವಾಸೋದ್ಯಮ ವಿಭಾಗ ನಿರ್ವಹಿಸುತ್ತಿದ್ದು, ಆನ್‌ಲೈನ್ ಟಿಕೆಟ್ ವ್ಯವಸ್ಥೆ ಮಾಡಿದೆ. ಆದರೆ ಅರಣ್ಯ ಇಲಾಖೆ ಮಂಗಳೂರು ವಲಯದ ೮ ಪ್ರಮುಖ ಪ್ರದೇಶಗಳು ಸೇರಿ ರಾಜ್ಯದೆಲ್ಲೆಡೆಯ ಬಹಳಷ್ಟು ಚಾರಣ ಪಥಗಳಿಗೆ ಇನ್ನೂ ಚಾರಣಕ್ಕೆ ಅವಕಾಶ ನೀಡಿಲ್ಲ. ಈ ಎಲ್ಲ ಚಾರಣ ಪಥಗಳಿಗೂ ಏಕಕಾಲದಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿದೆ ಎಂದರು.

ಕೆಲವು ಪ್ರವಾಸಿ ಸಂಸ್ಥೆಗಳು (ಟೂರ್ ಆಪರೇಟರ್‌ಗಳು) ಚಾರಣ ಪಥಗಳ ಬಗ್ಗೆ ಯುವ ಜನರಲ್ಲಿ ಅತಿಯಾದ ಆಸಕ್ತಿ ಕೆರಳಿಸುತ್ತಿದ್ದು, ಇದರ ಪರಿಣಾಮ ಚಾರಣ ಪಥಗಳಲ್ಲಿ ವಾರಾಂತ್ಯದಲ್ಲಿ ದಟ್ಟಣೆ ಹೆಚ್ಚುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದ ರಾಶಿಯೂ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರಕೃತಿ, ವನ್ಯಜೀವಿಗಳನ್ನು ಉಳಿಸಲು ಕೆಲವು ಕಠಿಣ ಕ್ರಮ ಕೈಗೊಳ್ಳುವ ಅಗತ್ಯತೆ ಇದೆ ಎಂದು ಸಚಿವರು ಹೇಳಿದರು.

ಮಂಗಳೂರು ವೃತ್ತದಲ್ಲಿ ೧೫೦ ಹೆಕ್ಟೇರ್ ಪ್ರದೇಶದಲ್ಲಿ ಕಾಂಡ್ಲಾವನಗಳನ್ನು ನೆಡಲು ಪ್ರಸ್ತಾವನೆ ಸಲ್ಲಿಸುವಂತೆ ಅಕಾರಿಗಳಿಗೆ ಸೂಚಿಸಿದ್ದೇನೆ. ಮುಂದಿನ ದಿನಗಳಲ್ಲಿ ೧೦ ಲಕ್ಷ ಕಾಂಡ್ಲಾ ಗಿಡಗಳನ್ನು ನೆಡಲಾಗುವುದು ಎಂದರು.

ಸಿಆರ್‌ಝಡ್ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪತ್ತೆಹಚ್ಚಿ, ಕೋರ್ಟ್‌ನಲ್ಲಿ ಬಾಕಿ ಉಳಿದ ಪ್ರಕರಣಗಳ ಶೀಘ್ರ ವಿಲೇವಾರಿ ಮಾಡಿಸಲು ಸೂಚಿಸಿದ್ದು, ನಿಯಮ ಉಲ್ಲಂಘನೆ ಮಾಡಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಕಳೆದ ವರ್ಷ ರಾಜ್ಯದ ೫ ಪಟ್ಟಣಗಳನ್ನು ಏಕಬಳಕೆ ಪ್ಲಾಸ್ಟಿಕ್ ಮುಕ್ತ ಮಾಡುವ ಘೋಷಣೆ ಮಾಡಲಾಗಿತ್ತು. ಅದರಂತೆ ಬಹಳಷ್ಟು ಕ್ರಮ ಕೈಗೊಳ್ಳಲಾಗಿದೆ. ಆದರೂ ಪ್ಲಾಸ್ಟಿಕ್ ಮುಕ್ತ ಆಗಿಲ್ಲ. ಈ ಬಗ್ಗೆ ಜನಜಾಗೃತಿ ಬೇಕಿದೆ. ಸಿಬ್ಬಂದಿ ಕೊರತೆ ನೀಗಿಸಿ ಯುದ್ಧೋಪಾದಿಯಲ್ಲಿ ಈ ನಿಟ್ಟಿನಲ್ಲಿ ಕಾರ್ಯಾಚರಣೆ ನಡೆಸಲಾಗುವುದು ಎಂದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!