ಹೊಸದಿಗಂತ ವರದಿ, ಬಳ್ಳಾರಿ:
ದಲಿತ, ಹಿಂದುಳಿದ ವರ್ಗದವರ ಪರ ಇರೋದು ಬಿಜೆಪಿ ಮಾತ್ರ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು.
ನಗರದ ಜಿ.ಸ್ಕ್ವಾಯರ್ ಪ್ರದೇಶದಲ್ಲಿ ಬಿಜೆಪಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪರಿಶಿಷ್ಟ ಪಂಗಡಗಳ ನವಶಕ್ತಿ ಸಮಾವೇಶದಲ್ಲಿ ಮಾತನಾಡಿದರು. ನಮ್ಮ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದರೇ, ಕಾಂಗ್ರೆಸ್ ನವರು ನಾವು ಅಧಿಕಾರಕ್ಕೆ ಬಂದರೇ ಈ ಕಾಯ್ದೆಯನ್ನು ಹಿಂಪಡಿತೇವೆ ಅಂತಾರೆ, ಶಿವನ ಆವಾಸ ಸ್ಥಾನವಾದ ಕಪಾಲಿ ಬೆಟ್ಟವನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕ್ರೈಸ್ತ ಬೆಟ್ಟ ಮಾಡಲು ಹೊರಟರು, ಈ ಹಿನ್ನೆಲೆ ಅವರಿಗೆ ಉನ್ನತ ಸ್ಥಾನ, ಹುದ್ದೆ ಸಿಕ್ಕಿತು, ಕಾಂಗ್ರೆಸ್ ನವರಿಗೆ ಕುಂಕುಮ ಕಂಡರೆ ಆಗೋಲ್ಲ, ಕೇಸರಿ ಬಣ್ಣ ಅಂದ್ರೇ ಕೆಂಡಾ ಮಂಡಲರಾಗ್ತಾರೆ, ಅಂತವರಿಗೆ ಮತ ಹಾಕಬೇಕಾ, ಕಾಂಗ್ರೆಸ್ ಮತಾಂತರಕ್ಕೆ ಕುಮ್ಮಕ್ಕು ನೀಡುವ ಪಕ್ಷ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡಿ, ಕಳೆದ 8 ವರ್ಷಗಳಿಂದ ನಮ್ಮ ಸರ್ಕಾರ ದೇಶದ ಅಭಿವೃದ್ಧಿ ಜೊತೆಗೆ ಎಲ್ಲ ವರ್ಗದವರ ಪರ ಕೆಲಸ ಮಾಡುತ್ತಿದೆ. ಕೊರೋನಾ ಸುನಾಮಿ ವೇಳೆ ಜಾಗತಿಕ ಆರ್ಥಿಕ ಹಿಂಜರಿತ, ರಷ್ಯಾ ಉಕ್ರೇನ್ ಯುದ್ದದ ಮಧ್ಯೆಯೂ ನಮ್ಮಮೋದಿಜೀ ಅವರು, ದೇಶವನ್ನು ಸಮರ್ಥವಾಗಿ ಮುನ್ನೆಡೆಸುತ್ತಿದ್ದಾರೆ. ನಾವು ಕೊಟ್ಟ ಮಾತಿನಂತೆ ಎಸ್ಸಿ, ಎಸ್ಟಿ ಅವರಿಗೆ ಮೀಸಲಾತಿ ಹೆಚ್ಚಳ ಮಾಡುವ ಮೂಲಕ ನಮ್ಮ ಬದ್ದತೆ ಪ್ರದರ್ಶಿಸಿದ್ದೇವೆ ಎಂದರು. ಕೇಂದ್ರ ಸಚಿವ ಅರ್ಜುನ್ ಮುಂಡಾ ಅವರು ಮಾತನಾಡಿ, ಎಸ್ಸಿ, ಎಸ್ಟಿ ಸಮುದಾಯದವರ ಸುಮಾರು ವರ್ಷಗಳ ಮೀಸಲಾತಿ ಹೆಚ್ಚಳ ಬೇಡಿಕೆಯನ್ನು ಸಿ.ಎಂ.ಬೊಮ್ಮಾಯಿ ಅವರು ಈಡೇರಿಸಿದ್ದಾರೆ, ಅವರಿಗೆ ನಮ್ಮ ಸಮುದಾಯದವರು ಋಣಿಯಾಗಿರಬೇಕು, ಸಚಿವ ಶ್ರಿರಾಮುಲು ಅವರು ಹೇಳುವ ಮಾತನ್ನು ನಾನು ಒಪ್ಪಿ ಅವರನ್ನು ಬೆಂಬಲಿಸುತ್ತೇನೆ, ನಮ್ಮ ಪಕ್ಷ ದಲಿತರನ್ನು ಮೇಲಕ್ಕೆತ್ತುವ ಕೆಲಸ ಮಾಡುತ್ತಿದೆ, ಕಾಂಗ್ರೆಸ್ ನವರಿಗೆ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರ, ವರ್ಗದವರ ಮತ ಬೇಕು, ಆದರೇ, ಅವರಿಗೆ ಈ ಸಮುದಾಯಗಳ ಅಭಿವೃದ್ಧಿ ಬೇಕಿಲ್ಲ ಎಂದು ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಜಿ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ರಾಜಾಹುಲಿ, ಮಾಜಿ ಸಿ.ಎಂ.ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸೇರಿದಂತೆ ಸಚಿವರಾದ ಶ್ರೀರಾಮುಲು, ಹಾಲಪ್ಪ ಆಚಾರ್, ಆನಂದ್ ಸಿಂಗ್, ಗೋವಿಂದ ಕಾರಜೋಳ್, ಸಿಸಿ ಪಾಟೀಲ್, ಶಾಸಕರಾದ ಸೋಮಶೇಖರ್ ರೆಡ್ಡಿ, ಎಂ.ಎಸ್.ಸೋಮಲಿಂಗಪ್ಪ, ಕರುಣಾಕರ ರೆಡ್ಡಿ, ಎನ್.ವೈ.ಗೋಪಾಲಕೃಷ್ಣ, ರಾಜೂಗೌಡ, ಶಿವನಗೌಡ ನಾಯಕ್, ರಮೇಶ್ ಜಾರಕಿಹೊಳಿ,ಬಾಲಚಂದ್ರ ಜಾರಕಿಹೊಳಿ, ತಿಪ್ಪರಾಜು ಹವಾಲ್ದಾರ್ ಸೇರಿದಂತೆ ಇತರರಿದ್ದರು.