ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಕಾರ್ತಾದಲ್ಲಿ ನಡೆದ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸಾತ್ವಿಕ್ ಸಾಯಿರಾಜ್ ರಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಪುರುಷರ ಡಬಲ್ಸ್ ಪ್ರಶಸ್ತಿ ಗೆದ್ದು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಇದು BWF 1000 ಸೂಪರ್ ಸಿರೀಸ್ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪ್ರಶಸ್ತಿ ಎಂಬುದು ವಿಶೇಷ.
ಫೈನಲ್ ಪಂದ್ಯದಲ್ಲಿ ಭಾರತದ ಜೋಡಿಯು ಮಲೇಷ್ಯಾದ ಆರೋನ್ ಚಿಯಾ ಮತ್ತು ವೂಯಿ ಯಿಕ್ ಯೆಹ್ ಅವರನ್ನು 21-17, 21-17 ಸೆಟ್ಗಳಿಂದ ಸೋಲಿಸಿ ಇತಿಹಾಸ ನಿರ್ಮಿಸಿದರು. ಇದರೊಂದಿಗೆ 41 ವರ್ಷಗಳ ಇತಿಹಾಸ ಹೊಂದಿರುವ ಬಿಡಬ್ಲ್ಯುಎಫ್ 1000 ಸೂಪರ್ ಸಿರೀಸ್ನಲ್ಲಿ ಭಾರತೀಯ ತಾರೆಗಳು ಚಾಂಪಿಯನ್ ಪಟ್ಟ ಅಲಂಕರಿಸಿದಂತಾಗಿದೆ.
ಈ ಐತಿಹಾಸಿಕ ಸಾಧನೆಗೂ ಮುನ್ನ ಏಪ್ರಿಲ್ನಲ್ಲಿ ನಡೆದ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲೂ ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ ಜೋಡಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಮಲೇಷ್ಯಾದ ಓಂಗ್ ಯೂ ಸಿನ್ ಮತ್ತು ಟಿಯೊ ಇಯೊ ಯೀ ಜೋಡಿಯನ್ನು ಸೋಲಿಸಿ ಏಷ್ಯನ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತಕ್ಕೆ ಮೊಟ್ಟ ಮೊದಲ ಚಿನ್ನದ ಪದಕ ತಂದುಕೊಟ್ಟ ಐತಿಹಾಸಿಕ ಸಾಧನೆ ಮಾಡಿದ್ದರು.