Thursday, October 23, 2025

ಅಕ್ರಮ ಗಣಿಗಾರಿಕೆ ತಡೆಯಲು ‘ಆಪರೇಷನ್ ಕ್ಲೀನ್ ಕೊಪ್ಪಳ’: ಲಂಚಗುಳಿ ಅಧಿಕಾರಿಗಳ ಮೇಲೆ ಸಿಎಂ ಸಿದ್ದರಾಮಯ್ಯ ಕಣ್ಣು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಭ್ರಷ್ಟಾಚಾರದ ಹಾವಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಸರ್ಕಾರವು ಇದನ್ನು ನಿಯಂತ್ರಿಸಲು ಕಠಿಣ ಕ್ರಮಕ್ಕೆ ಮುಂದಾಗಿದೆ. ಸ್ಥಳೀಯ ಶಾಸಕರಾದ ಬಸವರಾಜ ರಾಯರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಭ್ರಷ್ಟಾಚಾರಕ್ಕೆ ಅವಕಾಶ ನೀಡುತ್ತಿರುವ ಮತ್ತು ಅನೇಕ ವರ್ಷಗಳಿಂದ ಕೊಪ್ಪಳದಲ್ಲಿಯೇ ಬೀಡುಬಿಟ್ಟಿರುವ ಅಧಿಕಾರಿಗಳನ್ನು ತಕ್ಷಣವೇ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ.

ಅನಿಯಂತ್ರಿತ ಮರಳು ಮತ್ತು ಗ್ರಾನೈಟ್ ಲೂಟಿ
ಜಿಲ್ಲೆಯಲ್ಲಿ ತುಂಗಭದ್ರಾ ನದಿ ಮತ್ತು ಹಿರೇಹಳ್ಳದಲ್ಲಿ ಮರಳು ಅಕ್ರಮ ಗಣಿಗಾರಿಕೆಯು ತೀವ್ರ ಸ್ವರೂಪ ಪಡೆದಿದ್ದು, ಅದನ್ನು ನಿಯಂತ್ರಿಸುವುದು ಅಸಾಧ್ಯ ಎಂಬಂತಾಗಿದೆ. ಹಿರೇಹಳ್ಳದಲ್ಲಿನ ಅಕ್ರಮ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಸಾರವಾದ ನಂತರ ಎಚ್ಚೆತ್ತ ಅಧಿಕಾರಿಗಳು ಪ್ರಕರಣಗಳನ್ನು ದಾಖಲಿಸಿದ್ದಾರೆ.

ಇದರ ಜೊತೆಗೆ, ಬೂದಗುಂಪಾ, ಕೆರೆಹಳ್ಳಿ ಮತ್ತು ಬಂಡಿ ಹರ್ಲಾಪುರ ಭಾಗಗಳಲ್ಲಿ ಅಕ್ರಮ ಗ್ರಾನೈಟ್ ಗಣಿಗಾರಿಕೆ ಸಹ ಅವ್ಯಾಹತವಾಗಿ ನಡೆಯುತ್ತಿದ್ದು, ಇದರ ಬಗ್ಗೆ ದಾಖಲಾದ ದೂರುಗಳ ಆಧಾರದ ಮೇಲೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹೆಚ್ಚುವರಿ ನಿರ್ದೇಶಕರ ನೇತೃತ್ವದ ತಂಡವು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ.

ಬೆಣ್ಣಿಕೆರೆಯಲ್ಲಿ ಭ್ರಷ್ಟಾಚಾರ ದೃಢ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸ್ಸು
ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಗಂಭೀರ ವಿಷಯವೊಂದು ಬೆಳಕಿಗೆ ಬಂದಿದೆ. ಕುಕನೂರು ತಾಲೂಕಿನ ತಳಕಲ್ ಗ್ರಾಮದ 9.4 ಎಕರೆ ವಿಸ್ತೀರ್ಣದ ಬೆಣ್ಣಿಕೆರೆಯಲ್ಲಿ ಹೂಳು ತೆಗೆಯುವ ಪ್ರಕ್ರಿಯೆಯಲ್ಲಿ ಅಧಿಕಾರಿಗಳು ನಿಯಮಗಳನ್ನು ಉಲ್ಲಂಘಿಸಿರುವುದು ದೃಢಪಟ್ಟಿದೆ.

ಮೊದಲು ಹೂಳನ್ನು ಮಾರಾಟ ಮಾಡಿ ರಾಜಧನ ಪಾವತಿಗೆ ಸೂಚಿಸಲಾಗಿತ್ತು. ಆದರೆ, ನಂತರ ಈ ಆದೇಶವನ್ನು ಮಾರ್ಪಡಿಸಿ ಹೂಳನ್ನು ಮಾರಾಟ ಮಾಡದಂತೆ ಆದೇಶಿಸಲಾಯಿತು. ಈ ಮೂಲಕ ಉದ್ದೇಶಪೂರ್ವಕವಾಗಿ ಭ್ರಷ್ಟಾಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಈ ಸಂಬಂಧ ಇಲಾಖೆಯ ನಿರ್ದೇಶಕರಿಗೆ ವರದಿ ಸಲ್ಲಿಸಲಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ.

error: Content is protected !!