Friday, November 14, 2025

ದೆಹಲಿ ಸ್ಫೋಟದ ಬೆನ್ನಲ್ಲೇ ಕಾಶ್ಮೀರದಲ್ಲಿ ‘ಆಪರೇಷನ್ ಕ್ಲೀನ್ ಅಪ್’: 600ಕ್ಕೂ ಹೆಚ್ಚು ಜನರು ವಶಕ್ಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನವೆಂಬರ್ 10ರಂದು ನವದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಸ್ಫೋಟ ಪ್ರಕರಣದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಬೃಹತ್ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ. ಈ ಸ್ಫೋಟದಲ್ಲಿ 13 ನಾಗರಿಕರು ಸಾವನ್ನಪ್ಪಿದ ಬೆನ್ನಲ್ಲೇ, ಭಯೋತ್ಪಾದಕ ಜಾಲದ ಸುಳಿವು ಪತ್ತೆಹಚ್ಚಲು ಕೇಂದ್ರಾಡಳಿತ ಪ್ರದೇಶದಾದ್ಯಂತ 500ಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾರ್ಡನ್-ಅಂಡ್-ಸರ್ಚ್ ಕಾರ್ಯಾಚರಣೆ ನಡೆಸಲಾಗಿದೆ.

ಈ ಭದ್ರತಾ ಬಿಗಿ ಕ್ರಮದಲ್ಲಿ, ನಿಷೇಧಿತ ಸಂಘಟನೆಯಾದ ಜಮಾತ್-ಎ-ಇಸ್ಲಾಮಿ ಸದಸ್ಯರ ಮನೆಗಳ ಮೇಲೆ ದಾಳಿ ಮಾಡಲಾಗಿದ್ದು, ಇದುವರೆಗೆ ಕನಿಷ್ಠ 600ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ.

ದೆಹಲಿ ಸ್ಫೋಟ ಪ್ರಕರಣದಲ್ಲಿ ದಕ್ಷಿಣ ಕಾಶ್ಮೀರದ ಮೂವರು ವೈದ್ಯರ ಪಾತ್ರವಿರಬಹುದೆಂಬ ಶಂಕೆಯ ಹಿನ್ನೆಲೆಯಲ್ಲಿ, ಈ ಭಾಗದಲ್ಲಿ ಭದ್ರತಾ ಪಡೆಗಳು ಹೆಚ್ಚಿನ ನಿಗಾ ವಹಿಸಿವೆ. ಇದರ ಭಾಗವಾಗಿ, ಶ್ರೀನಗರದಲ್ಲಿ ವೈದ್ಯ ತಜಮುಲ್ ಅಹ್ಮದ್ ಮಲಿಕ್ ಎಂಬವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆದರೆ, ವೈದ್ಯರ ತಂದೆ ಮೊಹಮ್ಮದ್ ಅಯೂಬ್ ಮಲಿಕ್ ಅವರು, “ದೆಹಲಿ ಸ್ಫೋಟಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಹರಡುತ್ತಿರುವ ವರದಿಗಳು ಸಂಪೂರ್ಣ ಸುಳ್ಳು,” ಎಂದು ಸ್ಪಷ್ಟನೆ ನೀಡಿದ್ದಾರೆ.

ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಲ್ಲಿ 400ಕ್ಕೂ ಹೆಚ್ಚು CASOs ಕಾರ್ಯಾಚರಣೆಗಳು ನಡೆದಿವೆ. ಈ ಕಾರ್ಯಾಚರಣೆಗಳಲ್ಲಿ ಪಾಕಿಸ್ತಾನದಿಂದ ಕಾರ್ಯನಿರ್ವಹಿಸುತ್ತಿರುವ JKNOPs (J&K ನ್ಯಾಷನಲ್ಸ್) ಮತ್ತು ಇತರ ನಿಷೇಧಿತ ಸಂಘಟನೆಗಳೊಂದಿಗೆ ಸಂಬಂಧ ಹೊಂದಿರುವ ಸುಮಾರು 500 ಜನರ ವಿಚಾರಣೆ ನಡೆದಿದೆ. ಶಂಕಿತರ ಪೈಕಿ ಹಲವರನ್ನು ವಶಕ್ಕೆ ಪಡೆದು ಅನಂತ್‌ನಾಗ್‌ನ ಮಟ್ಟನ್ ಜೈಲಿಗೆ ಸ್ಥಳಾಂತರಿಸಲಾಗಿದೆ. ದೆಹಲಿ ದಾಳಿಯ ನಂತರ ಕಾಶ್ಮೀರದಲ್ಲಿ ಶಂಕಿತ ಉಗ್ರರ ವಿರುದ್ಧ ಕೈಗೊಂಡಿರುವ ಅತ್ಯಂತ ದೊಡ್ಡ ಕಾರ್ಯಾಚರಣೆ ಇದಾಗಿದೆ.

error: Content is protected !!