ಆಪರೇಷನ್ ಸಿಂದೂರ್ ಸಮರ್ಥನೀಯ, ಪೂರ್ವಯೋಜಿತ ಕ್ರಮ: ಗ್ರೀಸ್ ನಲ್ಲಿ ಭಾರತದ ಸರ್ವಪಕ್ಷಗಳ ನಿಯೋಗ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ವಿರುದ್ಧ ಭಾರತದ ಅಚಲ ನಿಲುವು ಪ್ರಸ್ತುತಪಡಿಸಲು ಸಂಸದೆ ಕನಿಮೋಳಿ ನೇತೃತ್ವದ ಸರ್ವಪಕ್ಷಗಳ ನಿಯೋಗವು ಸ್ಲೊವೇನಿಯಾದಿಂದ ಗ್ರೀಸ್ ದೇಶಕ್ಕೆ ಆಗಮಿಸಿದ್ದು, ಭಯೋತ್ಪಾದನೆಯ ಬಗ್ಗೆ ಭಾರತದ ಶೂನ್ಯ ಸಹಿಷ್ಣುತೆಯ ಕುರಿತ ದೃಢನಿಶ್ಚಯದ ಮತ್ತು ರಾಜಿರಹಿತ ನೀತಿಯನ್ನು ಒತ್ತಿ ಹೇಳಿದೆ.

ರಷ್ಯಾ, ಸ್ಲೊವೇನಿಯಾ ಭೇಟಿ ಬಳಿಕ ಗ್ರೀಸ್‌ ಗೆ ಬಂದಿಳಿದ ಸರ್ವಪಕ್ಷ ನಿಯೋಗವನ್ನು ಭಾರತದ ರಾಯಭಾರಿ ಅಧಿಕಾರಿ ರುದ್ರೇಂದ್ರ ಟಂಡನ್ ಬರಮಾಡಿಕೊಂಡರು. ಆ ಬಳಿಕ ನಿಯೋಗವು ಹೆಲೆನಿಕ್ ರಿಪಬ್ಲಿಕ್ ಉನ್ನತ ಮಟ್ಟದ ಚರ್ಚೆಗಳಲ್ಲಿ ಭಾಗವಹಿಸಿದೆ. ನಿಯೋಗವು ಗ್ರೀಸ್‌ನ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು, ಡೆಪ್ಯೂಟಿ ಮಿನಿಸ್ಟರ್‌ ಟಾಟೋಸ್ ಚಾಟ್ಜಿವಾಸಿಲಿಯೊ ಅವರೊಂದಿಗೆ ಸಭೆ ನಡೆಸಿ ಪಹಲ್ಗಾಮ್‌ನಲ್ಲಿ ನಡೆದ ಕ್ರೂರ ಭಯೋತ್ಪಾದಕ ದಾಳಿಯ ಬಗ್ಗೆ ಸಮಗ್ರ ವಿವರಣೆ ನೀಡಿದೆ. ಭಯೋತ್ಪಾದನೆಯ ವಿರುದ್ದ ಭಾರತದ ಸ್ಪಷ್ಟ ನಿಲುವು, ಆಪರೇಷನ್ ಸಿಂದೂರ್ ಹಾಗೂ ಪಾಕಿಸ್ತಾನದ ಗಡಿಯಾಚೆಗಿನ ಭಯೋತ್ಪಾದನೆಯನ್ನು ವಿವರವಾಗಿ ತೆರೆದಿಟ್ಟಿದೆ.

ಇದಾದ ನಂತರ ನಿಯೋಗವು ಗ್ರೀಕ್, ಹೆಲೆನಿಕ್ ಫೌಂಡೇಶನ್ ಫಾರ್ ಯುರೋಪಿಯನ್ ಅಂಡ್ ಫಾರಿನ್ ಪಾಲಿಸಿ (ELIAMEP)ನ ಮಹಾನಿರ್ದೇಶಕಿ ಮಾರಿಯಾ ಗವೌನೆಲಿ ಹಾಗೂ ಅವರ ತಂಡ, ಸಂಸತ್ತಿನ ಪ್ರಮುಖ ಸದಸ್ಯರು, ಪ್ರಮುಖ ನೀತಿ ತಜ್ಞರು, ವಿಚಾರವಂತರು-ಚಿಂತಕರರು ಹಾಗೂ ಮಾಧ್ಯಮದೊಂದಿಗೆ ಸರಣಿ ಸಭೆಗಳನ್ನು ನಡೆಸಿ ಭಯೋತ್ಪಾದನೆ ವಿರುದ್ಧದ ಭಾರತದ ಸಮರವನ್ನು ಸ್ಪಷ್ಟವಾಗಿ ಮನವರಿಕೆ ಮಾಡಿದೆ. ಆ ಮೂಲಕ, ಭಾರತದ ದೃಢವಾದ ಭಯೋತ್ಪಾದನಾ ವಿರೋಧಿ ಸಿದ್ಧಾಂತವನ್ನು ಪುನರುಚ್ಚರಿಸಿದೆ. ದಾಳಿಗೆ ನೇರ ಪ್ರತಿಕ್ರಿಯೆಯಾಗಿ ಆಪರೇಷನ್ ಸಿಂದೂರ್ ಕಾರ್ಯಾಚರಣೆಯು ಸಮರ್ಥನೀಯ ಮತ್ತು ಪೂರ್ವಯೋಜಿತ ಕ್ರಮ. ಇದು ಭಾರತದ ಸಮನ್ವಯ ನ್ಯಾಯದ ತತ್ವಗಳಿಗೆ ಅನುಗುಣವಾಗಿದೆ ಎಂದು ನಿಯೋಗ ಸ್ಪಷ್ಟಪಡಿಸಿದೆ.

ಭಾರತದ ಏಕತೆ, ಶಾಂತಿಗೆ ಅಚಲವಾದ ಬದ್ಧತೆಯನ್ನು ಮತ್ತು ಜಾಗತಿಕ ಭಯೋತ್ಪಾದನೆಯ ಬೆದರಿಕೆಯನ್ನು ಎದುರಿಸುವ ದೃಢ ಸಂಕಲ್ಪಕ್ಕೆ ಹಾಗೂ ಭಯೋತ್ಪಾದನೆ ಎಂಬ ಜಾಗತಿಕ ಪಿಡುಗನ್ನು ಎದುರಿಸಲು ಅಂತಾರಾಷ್ಟ್ರೀಯ ಸಮುದಾಯವು ಒಂದಾಗಬೇಕೆಂಬ ಭಾರತದ ನಿಲುವಿಗೆ ಗ್ರೀಸ್ ದೇಶ ಕೂಡ ತನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!