ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್ ಘಟನೆಗೆ ಪ್ರತೀಕಾರವಾಗಿ ಕೇಂದ್ರ ಸರ್ಕಾರ ಕೈಗೆತ್ತಿಕೊಂಡ ‘ಆಪರೇಷನ್ ಸಿಂದೂರ’ಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ್ ಮೋಹನ್ ಭಾಗವತ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಇದು ದೇಶದ ಭದ್ರತೆ ದೃಷ್ಟಿಯಲ್ಲಿ ಕೈಗೊಂಡ ಅಗತ್ಯ ಕ್ರಮವಾಗಿದೆ. ದೇಶದ ಸ್ವಾಭಿಮಾನವನ್ನು ಈ ಕಾರ್ಯಾಚರಣೆ ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ, ಉಗ್ರರಿಗೆ ನೀಡುತ್ತಿರುವ ಸೌಲಭ್ಯ, ಸಹಕಾರಗಳನ್ನು ಮೆಟ್ಟಿನಿಲ್ಲಲು ಮಿಲಿಟರಿ ಕ್ರಮ ಅಗತ್ಯ ಹಾಗೂ ಅನಿವಾರ್ಯ ಎಂಬುದನ್ನು ನಾವು ಸಂಪೂರ್ಣವಾಗಿ ಒಪ್ಪುತ್ತೇವೆ ಎಂದಿರುವ ಅವರು, ಇಂತಹ ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭ ಇಡೀ ರಾಷ್ಟ್ರದ ಜನತೆ ಸರ್ಕಾರ ಮತ್ತು ಸಶಸ್ತ್ರ ಪಡೆಗಳ ಬೆಂಬಲಕ್ಕೆ ನಿಂತಿದೆ ಎಂದು ಹೇಳಿದ್ದಾರೆ.
ಭಾರತೀಯ ಗಡಿಯ ಧಾರ್ಮಿಕ ಸ್ಥಳ, ನಾಗರಿಕರ ಆಸ್ತಪಾಸ್ತಿಗಳ ಮೇಲೆ ಪಾಕ್ ಸೇನೆ ನಡೆಸಿದ ದಾಳಿಯನ್ನು ನಾವು ಖಂಡಿಸುತ್ತೇವೆ. ಈ ಅಮಾನವೀಯ ದಾಳಿಯಲ್ಲಿ ಸಂತ್ರಸ್ಥರಾದ ಕುಟುಂಬಗಳಿಗೆ ನಾವು ನಮ್ಮ ಸಂತಾಪ ಸೂಚಿಸುತ್ತೇವೆ. ಇದೊಂದು ಸವಾಲಿನ ಸಮಯವಾಗಿದ್ದು, ಸರ್ಕಾರ ನೀಡಿದ ಸೂಚನೆಗಳನ್ನು ಸಂಪೂರ್ಣವಾಗಿ ಪಾಲಿಸುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ನಾಗರಿಕರಿಗೆ ಮನವಿ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.