ಬಿಹಾರ ಮತದಾರರ ಪರಿಷ್ಕರಣೆ ವಿರುದ್ಧ ವಿಪಕ್ಷಗಳ ಗದ್ದಲ: ಉಭಯ ಸದನ ಕಲಾಪಗಳು ನಾಳೆಗೆ ಮುಂದೂಡಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಸಂಸತ್ತಿನ ಉಭಯ ಸದನಗಳಲ್ಲಿ ಬಿಹಾರ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಸೇರಿದಂತೆ ಹಲವಾರು ಪ್ರಮುಖ ವಿಷಯಗಳ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷದ ಸದಸ್ಯರು ತೀವ್ರ ಪ್ರತಿಭಟನೆ ನಡೆಸಿದ್ದು ಹೀಗಾಗಿಸದನ ನಾಳೆಗೆ ಮುಂದೂಡಲಾಯಿತು.

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ ಕುರಿತು ಚರ್ಚೆಗೆ ಒತ್ತಾಯಿಸಿ ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದ ನಂತರ ಲೋಕಸಭೆಯನ್ನು ಮುಂದೂಡಲಾಯಿತು. ಒಂದು ಕಡೆ ವಿಪಕ್ಷಗಳು ಚರ್ಚೆಗೆ ಒತ್ತಾಯಿಸುತ್ತಿವೆ. ಮತ್ತೊಂದೆಡೆ ಸದನಕ್ಕೆ ಅಡ್ಡಿಪಡಿಸುವ ಮೂಲಕ ‘ದ್ವಿಮುಖ ನೀತಿ’ ಅನುಸರಿಸುತ್ತಿದೆ ಎಂದು ಸರ್ಕಾರ ಆರೋಪಿಸಿದೆ.

ಈ ವರ್ಷದ ಕೊನೆಯಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಬಿಹಾರದಲ್ಲಿ ಚುನಾವಣಾ ಆಯೋಗ ಆರಂಭಿಸಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯನ್ನು ಹಿಂಪಡೆಯುವಂತೆ ಮತ್ತು ಚರ್ಚೆಯನ್ನು ಮುಂದೂಡುವಂತೆ ವಿಪಕ್ಷಗಳು ಒತ್ತಾಯಿಸಿದ್ದವು. ಹೀಗಾಗಿ ಸಂಸತ್ತಿನ ಮಳೆಗಾಲದ ಅಧಿವೇಶನದ ಎರಡನೇ ದಿನದಂದು ಎರಡು ಬಾರಿ ಸದನವನ್ನು ಮುಂದೂಡಲಾಗಿತ್ತು. ನಂತರ ಮಧ್ಯಾಹ್ನ 2 ಗಂಟೆಗೆ ಸದನ ಮತ್ತೆ ಸೇರಿದಾಗ ವಿರೋಧ ಪಕ್ಷದ ಸದಸ್ಯರು ಲೋಕಸಭೆಯ ಬಾವಿಗೆ ಇಳಿದು ಪ್ರತಿಭಟಿಸಿದರು. ಹೀಗಾಗಿ ಸದನವನ್ನು ನಾಳೆಗೆ ಮುಂದೂಡಲಾಯಿತು.

ಸದನವನ್ನು ಸುಗಮವಾಗಿ ನಡೆಯಲು ಅನುವು ಮಾಡಿಕೊಡುವಂತೆ ಸಭಾಧ್ಯಕ್ಷ ದಿಲೀಪ್ ಸೈಕಿಯಾ ಅವರು, ಪದೇ ಪದೇ ವಿನಂತಿಸಿದರು. ಆದರೆ ವಿಪಕ್ಷಗಳು ಪ್ರತಿಭಟನೆಯನ್ನು ಮುಂದುವರೆಸಿದರು. ಈ ವೇಳೆ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಎದ್ದು ವಿರೋಧ ಪಕ್ಷದ ನಡವಳಿಕೆಯನ್ನು ಖಂಡಿಸಿದರು.

ನಿನ್ನೆ ನಡೆದ ವ್ಯವಹಾರ ಸಲಹಾ ಸಮಿತಿ ಸಭೆಯಲ್ಲಿ ಮೊದಲು ಆಪರೇಷನ್ ಸಿಂದೂರ್ ಬಗ್ಗೆ ಚರ್ಚೆ ನಡೆಸಲಾಗುವುದು ಮತ್ತು ಅದಕ್ಕೆ ಸಮಯವನ್ನು ಸಹ ನಿಗದಿಪಡಿಸಲಾಗಿದೆ ಎಂದು ಅವರು ಹೇಳಿದರು. ಚರ್ಚೆ ನಡೆಯುವ ನಿಯಮವನ್ನು ಮಾತ್ರ ನಿರ್ಧರಿಸಲಾಗುತ್ತದೆ. ಅವರು ಫಲಕಗಳನ್ನು ಹಿಡಿದುಕೊಂಡು ಇಲ್ಲಿಗೆ ಬಂದು ನಿಯಮಗಳನ್ನು ಉಲ್ಲಂಘಿಸುತ್ತಾರೆ, ಇದನ್ನು ನಾನು ಖಂಡಿಸುತ್ತೇನೆ ಎಂದು ರಿಜಿಜು ಹೇಳಿದರು.

ವಿಪಕ್ಷಗಳು ಚರ್ಚೆಗೆ ಕೇಳುತ್ತಿದ್ದಾರೆ ಮತ್ತು ನಾವು ಚರ್ಚೆಗೆ ಸಿದ್ಧರಿದ್ದೇವೆ. ಆದರೆ ಅವರು ಸದನವನ್ನು ಕಾರ್ಯರೂಪಕ್ಕೆ ತರಲು ಬಿಡುತ್ತಿಲ್ಲ . ಈ ‘ದ್ವಿಮುಖ ನೀತಿ ತಪ್ಪು’. ಒಂದೆಡೆ ಚರ್ಚಿಸುವಂತೆ ಕೇಳುತ್ತಾರೆ. ಮತ್ತೊಂದೆಡೆ ಈ ರೀತಿಯ ಗದ್ದಲವನ್ನು ಸೃಷ್ಟಿಸುತ್ತಾರೆ. ಸರ್ಕಾರ ಚರ್ಚೆಗೆ ಸಿದ್ಧವಾಗಿದೆ ಆದರೆ ವಿರೋಧ ಪಕ್ಷವು ಸಂಸತ್ತಿನ ಸಮಯವನ್ನು ವ್ಯರ್ಥ ಮಾಡುತ್ತಿದೆ ಎಂದು ರಿಜಿಜು ಹೇಳಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!