ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳ ರಾಜ್ಯದಲ್ಲಿ ನಂದಿನಿ ಹಾಲು ಮಾರಾಟಕ್ಕೆ ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟ (ಮಿಲ್ಮಾ) ವಿರೋಧ ವ್ಯಕ್ತಪಡಿಸಿದೆ.
ಮಿಲ್ಮಾ (Milma) ಮಲಬಾರ್ ವಲಯ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ಎಸ್.ಮಣಿ ಮಾತನಾಡಿ, ಭಾರತೀಯ ರಾಷ್ಟ್ರೀಯ ಸಹಕಾರಿ ಡೈರಿ ಫೆಡರೇಶನ್‌ನ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗುವುದು ಎಂದು ತಿಳಿಸಿದ್ದಾರೆ.
ಹಾಲು ಒಕ್ಕೂಟಗಳು ಇಷ್ಟು ದಿನ ಅನುಸರಿಸಿಕೊಂಡು ಬಂದಿರುವ ಕೆಲವು ನಿಯಮಗಳನ್ನು ಮುರಿಯುವುದು ನೈತಿಕವಾಗಿ ಸರಿಯಲ್ಲ. ಕರ್ನಾಟಕ ಕಾರ್ಪೊರೇಟ್ ಹಾಲು ಉತ್ಪಾದಕರು ಕೇರಳದಲ್ಲಿ ತನ್ನ ಮಳಿಗೆಗಳನ್ನು ತೆರೆಯುವ ನಿರ್ಧಾರದ ವಿರುದ್ಧ ಪತ್ರವನ್ನು ನೀಡಿದ್ದರೂ, ಅವರು ಅದನ್ನು ನಿರ್ಲಕ್ಷಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.
ಕರ್ನಾಟಕದಲ್ಲಿ ಉದ್ಯಮ ಆರಂಭಿಸುವ ಅಮುಲ್ ನಿರ್ಧಾರ ತಪ್ಪು. ಆದರೆ ಅದನ್ನು ವಿರೋಧಿಸುವ ನೈತಿಕ ಹಕ್ಕು ನಂದಿನಿ ಅವರಿಗೆ ಇಲ್ಲ ಎಂದು ಮಣಿ ಹೇಳಿದ್ದಾರೆ.
ಹಾಲು ಒಕ್ಕೂಟಗಳು ವಾಣಿಜ್ಯ ಹಿತಾಸಕ್ತಿಗಳಿಗಾಗಿ ಮಾತ್ರವಲ್ಲದೆ ತಮ್ಮ ರಾಜ್ಯದಲ್ಲಿ ಹೈನುಗಾರಿಕೆ ಮಾಡುವವರ ಕಲ್ಯಾಣಕ್ಕಾಗಿ ಕೆಲಸ ಮಾಡಬೇಕು. ಒಂದು ರಾಜ್ಯದ ಸಹಕಾರಿ ಸಂಸ್ಥೆಯು ಮತ್ತೊಂದು ರಾಜ್ಯದ ಸಹಕಾರಿ ಸಂಸ್ಥೆಯ ಮಾರುಕಟ್ಟೆಯಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವುದು ಸಹಕಾರದ ತತ್ವಗಳು ಮತ್ತು ಮೂಲಭೂತ ಮೌಲ್ಯಗಳಿಗೆ ವಿರುದ್ಧ ಎಂದು ಹೇಳಿದ್ದಾರೆ.
ನಂದಿನಿಯ ಉತ್ತಮ ಗ್ರಾಹಕರಾಗಿರುವ ಮಿಲ್ಮಾ ಸಂಸ್ಥೆಗೆ ಹೆಚ್ಚಿನ ಹಾಲು ಮಾರಾಟ ಮಾಡಿ ತೊಂದರೆ ನೀಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.