ತತ್ವ- ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಅಧಿಕಾರಕ್ಕೆ ಬರಲು ವಿಪಕ್ಷಗಳ ಪ್ರಯತ್ನ: ಎನ್.ರವಿಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೆಂಗಳೂರು: ವಿವಿಧ ವಿರೋಧ ಪಕ್ಷಗಳು ತಮ್ಮ ತತ್ವ- ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು ಅಧಿಕಾರಕ್ಕೆ ಬರಬೇಕೆಂದು ಏಕೈಕ ಉದ್ದೇಶದೊಂದಿಗೆ ಹೊರಟಿದ್ದಾರೆ. ಅದಕ್ಕಾಗಿ ಇದೇ 18ರಂದು ವಿಪಕ್ಷಗಳ ಸಭೆ ನಡೆಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಅವರು ಆಕ್ಷೇಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನರೇಂದ್ರ ಮೋದಿಜಿ ಅವರು 2047ರ ವೇಳೆಗೆ ಪ್ರಪಂಚದಲ್ಲಿ ಭಾರತವನ್ನು ನಂಬರ್ 1 ರಾಷ್ಟ್ರವಾಗಿ ಮಾಡುವ ದೂರದೃಷ್ಟಿಯನ್ನು ಇಟ್ಟುಕೊಂಡಿದ್ದಾರೆ. ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ಭಾರತವನ್ನು ಪರಿವರ್ತಿಸುವ ಒಂದೇ ಕನಸು ಮೋದಿಜಿ ಅವರದು. ಪಾರ್ಟಿ ಬೆಳೆಸುವುದು, ಮತಬ್ಯಾಂಕ್ ದೃಢೀಕರಣದ ಉದ್ದೇಶ ಅವರದಲ್ಲ. ಅಂಥ ದುರುದ್ದೇಶದ ಚಿಂತನೆ ವಿಪಕ್ಷಗಳದು ಎಂದು ಟೀಕಿಸಿದರು.

ನಿಸ್ವಾರ್ಥ ಮತ್ತು ದೂರದೃಷ್ಟಿಯ ಸಮರ್ಥ ನಾಯಕತ್ವವನ್ನು ಮೋದಿಜಿ ಕೊಡುತ್ತಿದ್ದು, ಅದನ್ನು ಜನರೂ ಅರ್ಥ ಮಾಡಿಕೊಂಡಿದ್ದಾರೆ ಎಂದು ನುಡಿದರು. ಮತ್ತೊಮ್ಮೆ ನರೇಂದ್ರ ಮೋದಿಜಿ ಅವರು ಪ್ರಧಾನಿ ಆಗಬೇಕೆಂಬ ಆಶಯ, ಅಭಿಲಾಶೆ ಜನರದು. ಅವರಿಗೆ ಅಧಿಕಾರ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಸದನ ಪ್ರಾರಂಭವಾಗಿ ಹತ್ತು ಹನ್ನೆರಡು ದಿನಗಳಾಗಿವೆ. ಕಾಂಗ್ರೆಸ್‍ನವರು, ಸಿಎಂ ಅವರು ರಾಜ್ಯಪಾಲರ ಕುರಿತು, ಬಜೆಟ್ ವಿಚಾರದಲ್ಲಿ ಮಾತನಾಡುತ್ತಿಲ್ಲ. ಅವರು ಮುಂದಿನ ಸಂಸತ್ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ತಮಗೆ ಬಹುಮತ, 41 ಶೇ ಮತಪ್ರಮಾಣ ಬಂದಿದೆ ಎಂದು ಹೇಳುತ್ತಿದ್ದಾರೆ. ಶೇ 41 ಮತಗಳಿಕೆಗೂ ಬಜೆಟ್‍ಗೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ಒಳ್ಳೆಯ ಬಜೆಟ್ ಕೊಟ್ಟಿದ್ದೀರಾ ಎಂದು ಕಾಂಗ್ರೆಸ್‍ನವರನ್ನು ಕೇಳಿದ ಅವರು, ಅಲ್ಪಸಂಖ್ಯಾತರ ಪರವಾಗಿರುವ ಬಜೆಟನ್ನು ನೀವು ಕೊಟ್ಟಿದ್ದೀರಿ. ಯಾವುದೇ ಗುಡಿ ಗೋಪುರಗಳು, ಸಾಧುಸಂತರು, ಸ್ವಾಮೀಜಿಗಳು, ವ್ಯಾಪಾರಿ ವರ್ಗ, ಕುಶಲಕರ್ಮಿಗಳು ನೀವೇನು ಬಜೆಟ್‍ನಲ್ಲಿ ನಯಾಪೈಸೆ ತೆಗೆದು ಇಟ್ಟಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಮದ್ಯಪ್ರಿಯರಿಗೆ ವಿಪರೀತ ತೆರಿಗೆ ಹೇರಿದ್ದೀರಿ. ಇದರ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಮಾತನಾಡುತ್ತಿಲ್ಲ. ನಾವು ಸಂಸತ್ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಭಾಷಣ ಮಾಡುತ್ತಾರೆ. ಸಂಸತ್ ಚುನಾವಣೆಯಲ್ಲಿ ಸೀಟು ಗೆಲ್ಲುವ ಅಜೆಂಡ ಫಿಕ್ಸ್ ಮಾಡಿದ್ದಾರೆ. ಬಜೆಟ್, ರಾಜ್ಯಪಾಲರ ಮಾತಿನ ಕುರಿತು ಮಾತನಾಡುವುದಿಲ್ಲ ಎಂದು ಟೀಕಿಸಿದರು.

ಆಡಳಿತಯಂತ್ರವನ್ನು ಲೋಕಸಭಾ ಚುನಾವಣೆಗೆ ಸಿದ್ಧ ಮಾಡುತ್ತಿದ್ದಾರೆ. ಭಾರತ ನಂಬರ್ ವನ್ ಮಾಡುವ ಉದ್ದೇಶ ಇವರದಲ್ಲ. ಜನರಿಗೆ ಉದ್ಯೋಗ ನೀಡುವ ಬಜೆಟ್ ಕೊಟ್ಟಿಲ್ಲ. ಜನರ ಉದ್ಯೋಗ ಕಸಿಯುವ ಬಜೆಟ್ ಇದು ಎಂದು ಆರೋಪಿಸಿದರು. ಮಹಿಳೆಯರಿಗೆ ಉಚಿತ ಪ್ರಯಾಣ, ಪ್ರವಾಸ ಮಾಡಲಿ; ಅಡ್ಡಿ ಇಲ್ಲ. ಆದರೆ, ಕಾರ್ಮಿಕರಿಗೆ- ಕೃಷಿ ವರ್ಗಕ್ಕೆ ಏನು ಮಾಡಿದ್ದೀರಿ? ನೀರಾವರಿಗೆ ಎಷ್ಟು ಹಣ ಕೊಟ್ಟಿದ್ದೀರಿ? ರೈತರಿಗೆ ಏನು ಕೊಡುಗೆ ನೀಡಿದ್ದೀರಿ? ರಸ್ತೆಗಳ ಅಭಿವೃದ್ಧಿಗೆ ಏನು ಮಾಡುತ್ತೀರಿ? ಎಂದು ಪ್ರಶ್ನೆಗಳನ್ನು ಮುಂದಿಟ್ಟರು.
ಮಳೆ ಇಲ್ಲ; ಉದ್ಯೋಗ ನೀಡಿಕೆಗೆ ಏನು ನಿಮ್ಮ ಯೋಜನೆ ಎಂದು ಕೇಳಿದ ಅವರು, ಸಂಕಷ್ಟದಲ್ಲಿರುವ ಖಾಸಗಿ ಬಸ್, ಆಟೋ ರಿಕ್ಷಾ, ಕ್ಯಾಬ್‍ನವರಿಗೆ ಏನು ಮಾಡುತ್ತೀರಿ? ಸಣ್ಣ, ಗೃಹ ಕೈಗಾರಿಕೆಗಳ ಪುನಶ್ಚೇತನಕ್ಕೆ ಏನು ಮಾಡುವಿರಿ ಎಂದು ಕೇಳಿದರು. ಆರು ಲಕ್ಷಕ್ಕೂ ಹೆಚ್ಚು ಉದ್ಯೋಗ ಭರ್ತಿ ಮಾಡಬೇಕಿದೆ. ಇವ್ಯಾವುದರ ಬಗ್ಗೆಯೂ ಗಮನ ಕೊಡುತ್ತಿಲ್ಲ ಎಂದು ಆರೋಪಿಸಿದರು.

ಸರಕಾರದ ಹಣವನ್ನು ಕಾಂಗ್ರೆಸ್ ಪಾರ್ಟಿಯ ಪಂಚ ಗ್ಯಾರಂಟಿ ಯೋಜನೆಗಳಿಗೆ ಉಪಯೋಗಿಸುತ್ತಿರುವುದು ಜನರಿಗೆ ಅರ್ಥವಾಗಿದೆ. ಸಂಸತ್ ಚುನಾವಣೆಯಲ್ಲಿ ಜನರು ಕಾಂಗ್ರೆಸ್‍ಗೆ ಪಾಠ ಕಲಿಸುವುದು ನಿಶ್ಚಿತ ಎಂದು ನುಡಿದರು.

ಎನ್‍ಡಿಎ ಸಭೆಗೆ ಜೆಡಿಎಸ್‍ಗೆ ಆಹ್ವಾನ ಕುರಿತು ಪ್ರಶ್ನೆಗೆ ಉತ್ತರ ನೀಡಿದ ಅವರು, ಸಭೆಗೆ ಆಹ್ವಾನ ಕೊಟ್ಟಿರಬಹುದು; ನನಗೆ ತಿಳಿದುಬಂದ ಮಾಹಿತಿ ಪ್ರಕಾರ ಕುಮಾರಸ್ವಾಮಿ ಮತ್ತು ದೇವೇಗೌಡರು ದೆಹಲಿಗೆ ಹೋಗಲಿದ್ದಾರೆ. ಇದರ ಬಗ್ಗೆ ನಡ್ಡಾಜಿ, ಅಮಿತ್ ಶಾ ಮತ್ತು ಪ್ರಧಾನಿಯವರು ನಿರ್ಧರಿಸಲಿದ್ದಾರೆ. ದೇಶದ ಒಳಿತನ್ನು ಗಮನಿಸಿ ನಿರ್ಣಯ ಕೈಗೊಳ್ಳಲಿದ್ದು, ಅದಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇವೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!