ಹೊಸ ದಿಗಂತ ಡಿಜಿಟಲ್ ಡೆಸ್ಕ್:
ವಿಪಕ್ಷಗಳು ಬುಧವಾರ ನೀಡಿದ ‘ಭಾರತ್ ಬಂದ್ ’ಕರೆಗೆ ದೇಶದ ಬೇರೆಕಡೆ ಅಷ್ಟೇನೂ ಪ್ರತಿಕ್ರಿಯೆ ಲಭಿಸಿಲ್ಲವಾದರೂ ಕೇರಳದಲ್ಲಿ ಆಳುವ ಸಿಪಿಎಂ ಬೆಂಬಲಿಗರು ಅನೇಕ ಕಡೆಗಳಲ್ಲಿ ಬಲವಂತದ ಬಂದ್ ನಡೆಸಿದ್ದು ಕಂಡುಬಂತು. ರಾಜ್ಯದ ಸಾರಿಗೆ ಸಚಿವ ಕೆ.ಬಿ.ಗಣೇಶ್ ಕುಮಾರ್ ಅವರು ಬಸ್ಸುಗಳ ಓಡಾಟಕ್ಕೆ ತಡೆ ಇರದು ಎಂದು ಭರವಸೆ ನೀಡಿದ್ದರೂ, ಯೂನಿಯನ್‌ಗಳಲ್ಲಿರುವ ಹಲವು ಕೆಎಸ್ಸಾರ್ಟಿಸಿ ನೌಕರರೂ ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಆದರೆ ಮುಷ್ಕರದಲ್ಲಿ ಪಾಲ್ಗೊಳ್ಳದ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರು ಸುರಕ್ಷತೆಗಾಗಿ ಹೆಲ್ಮೆಟ್ ಧರಿಸಿ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದಾರೆ.
ಶಿಬು ಥೋಮಸ್ ಕೆಎಸ್ಸಾರ್ಟಿಸಿ ಚಾಲಕರಾಗಿದ್ದು, ಪಟ್ಟನಂತಿಟ್ಟ-ಕೊಲ್ಲಂ ಮಾರ್ಗದಲ್ಲಿ ಹೆಲ್ಮೆಟ್ ಧರಿಸಿ ಬಸ್ಸು ಚಾಲನೆಗೈದರು. ಈ ಹಿಂದಿನ ಅನುಭವದಲ್ಲಿ ಕಲ್ಲೆಸೆತ ನಡೆದು ಚಾಲಕರು ಗಾಯಗೊಂಡ ಘಟನೆಯನ್ನು ಕಂಡಿದ್ದ ಅವರು, ಇಂತಹ ದಾರಿ ಕಂಡುಕೊಂಡು ತಮ್ಮ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಲು ಮುಂದಾಗಿದ್ದರು.ಹೀಗೆ ಅವರ ಬಸ್ಸು ಅಡೂರು ತಲುಪಿದಾಗ ಮುಷ್ಕರ ನಿರತರು ಅವರ ಬಸ್ಸನ್ನು ತಡೆದೇಬಿಟ್ಟಿದ್ದಾರೆ. ಶಿಬು ಮತ್ತು ಅವರ ಸಹೋದ್ಯೋಗಿಗಳು ಬಸ್ಸಿನಲ್ಲಿ ರೋಗಿಗಳಿದ್ದು,ಅವರು ಆಸ್ಪತ್ರೆಗೆ ತೆರಳಬೇಕಾಗಿದೆ ಎಂದು ವಿವರಣೆ ನೀಡಿದರೂ ಪ್ರತಿಭಟನಾಕಾರರು ಬಿಡದೆ ರೋಗಿಗಳನ್ನು ಇನ್ನೊಂದು ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿದರೇ ವಿನಾ ಬಸ್ಸನ್ನು ಮುಂದೆ ಹೋಗಲು ಬಿಡಲೇ ಇಲ್ಲ.
ಕೊಚ್ಚಿಯಲ್ಲಿ ಅನೇಕ ಕೆಎಸ್ಸಾರ್ಟಿಸಿ ಉದ್ಯೋಗಿಗಳು ಪೊಲೀಸರು ರಕ್ಷಣೆ ನೀಡಿದ್ದೇ ಆದರೆ ನಾವು ಕರ್ತವ್ಯಕ್ಕೆ ಸಿದ್ಧ ಎಂದಿದ್ದರು.ನೆಡುಂಬಶ್ಶೇರಿ ಅಂತಾರಾಷ್ಟ್ರೀಯ ವಿಮಾ ನಿಲ್ದಾಣಕ್ಕೆ ಹೋಗುವ ಎರ್ನಾಕುಳಂನ ಬಸ್ಸನ್ನು ಕೂಡ ಪ್ರತಿಭಟನಾಕಾರರು ಬಿಡಲಿಲ್ಲ.ಕರುನಾಗಪಳ್ಳಿ-ಕೊಲ್ಲಂ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಚಾಲಕರೊಬ್ಬರಿಗೆ ಮುಷ್ಕರನಿರತರು ಹಲ್ಲೆ ನಡೆಸಿದ ಬಗ್ಗೆ ಮಾಧ್ಯಮ ವರದಿಗಳು ತಿಳಿಸಿವೆ.ಅಮೃತಾ ಆಸ್ಪತ್ರೆಗೆ ಹೋಗುವ ಬಸ್ಸನ್ನು ಕೂಡ ಬಿಡದೆ ತಡೆದರು.ಆದರೆ ತಿರುವನಂತಪುರಂನಲ್ಲಿ ರೀಜನಲ್ ಕ್ಯಾನ್ಸರ್ ಸೆಂಟರ್, ಮೆಡಿಕಲ್ ಕಾಲೇಜು, ಶ್ರೀಚಿತ್ರಾ ಆಸ್ಪತ್ರೆಗೆ ಹೋಗುವ ಬಸ್ಸುಗಳು ಎಂದಿನಂತೆ ಕಾರ್ಯಾಚರಿಸಿದವು.