ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರಕಾರದ ವಿರುದ್ಧ ರಣತಂತ್ರ ರೂಪಿಸಲು ಈಗಾಗಲೇ ಒಂದಾದ ವಿಪಕ್ಷಗಳು ಪಾಟ್ನಾ ಸಭೆ ನಡೆಸಿದ್ದು, ಇದೀಗ ಎರಡನೇ ಸಭೆ ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಗುರುವಾರ ಘೋಷಿಸಿದ್ದಾರೆ.
ಪಾಟ್ನಾ ಸಭೆಯಲ್ಲಿ, ಕಾಂಗ್ರೆಸ್ ಸೇರಿದಂತೆ 17 ಪಕ್ಷಗಳು 2024 ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಿನಿಂದ ಹೋರಾಡಲು ಮತ್ತು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಕೆಲಸ ಮಾಡಲು ನಿರ್ಧಾರ ಮಾಡಿದ್ದವು. ಜಂಟಿ ಕಾರ್ಯತಂತ್ರವನ್ನು ರೂಪಿಸಲು ಅವರು ಎರಡನೇ ಸಭೆಯ ಸ್ಥಳವಾಗಿ ಶಿಮ್ಲಾವನ್ನು ನಿರ್ಧಾರ ಮಾಡಲಾಗಿತ್ತು. ಆದರೆ, ಅವರು ಜುಲೈ 13 ಮತ್ತು 14 ರಂದು ಬೆಂಗಳೂರಿನಲ್ಲಿ ಸಭೆ ನಡೆಸಲು ನಿರ್ಧರಿಸಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಪಾಟ್ನಾದ ಅವರ ನಿವಾಸದಲ್ಲಿ ಆಯೋಜಿಸಿದ್ದ ಮೊದಲ ಸಭೆಯಲ್ಲಿ ವಿವಿಧ ಪಕ್ಷಗಳ 32 ಕ್ಕೂ ಹೆಚ್ಚು ನಾಯಕರು ಭಾಗವಹಿಸಿದ್ದರು. ಮಾಯಾವತಿ (ಬಿಎಸ್‌ಪಿ), ನವೀನ್ ಪಟ್ನಾಯಕ್ (ಬಿಜೆಡಿ), ಕೆ ಚಂದ್ರಶೇಖರ್ ರಾವ್ (ಬಿಆರ್‌ಎಸ್) ಮತ್ತು ವೈಎಸ್ ಜಗನ್ ಮೋಹನ್ ರೆಡ್ಡಿ (ವೈಎಸ್‌ಆರ್‌ಸಿಪಿ) ಅವರಿಗೆ ಆಹ್ವಾನ ನೀಡಲಾಗಿರಲಿಲ್ಲ.