ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜಧಾನಿ ದೆಹಲಿಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ನಮೂನಾ ನದಿ ಅಪಾಯದ ಮಟ್ಟದಲ್ಲಿ ಉಕ್ಕಿ ಹರಿಯುತ್ತಿದೆ. ಸೋಮವಾರ ರಾತ್ರಿ 11 ಗಂಟೆಗೆ ಹಳೆಯ ರೈಲ್ವೆ ಸೇತುವೆಯಲ್ಲಿ ಯಮುನಾ ನದಿಯ ನೀರಿನ ಮಟ್ಟ 206.04 ಮೀಟರ್‌ಗೆ ಏರಿಕೆಯಾಗಿದೆ. ಯಮುನಾ ನದಿ ಅಪಾಯದ ಗಡಿ ದಾಟಿದ ಹಿನ್ನೆಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಯಮುನಾ ನದಿಯಲ್ಲಿ ಪ್ರವಾಹದ ಹೆಚ್ಚಳದಿಂದಾಗಿ ರಾಷ್ಟ್ರ ರಾಜಧಾನಿಯ ಮಯೂರ್ ವಿಹಾರ್ ಪ್ರದೇಶದ ದಡದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಮಂಗಳವಾರ ಮುಂಜಾನೆ 3 ಗಂಟೆಗೆ ಯಮುನಾ ನದಿಯ ನೀರಿನ ಮಟ್ಟ 206.65 ಮೀಟರ್ ತಲುಪಿದೆ. ನೆರೆಯ ಹರಿಯಾಣವು ಭಾರೀ ಮಳೆಯ ನಡುವೆ ಹತ್ನಿಕುಂಡ್ ಬ್ಯಾರೇಜ್‌ನಿಂದ ಯಮುನಾ ನದಿಗೆ ಹೆಚ್ಚಿನ ನೀರನ್ನು ಬಿಡುಗಡೆ ಮಾಡುತ್ತಿದೆ, ಇದರಿಂದಾಗಿ ನಿರಂತರವಾಗಿ ನೀರಿನ ಮಟ್ಟ ಏರುತ್ತಿದೆ. ಯಮುನಾ ನದಿಯ ಪ್ರವಾಹವನ್ನು ಎದುರಿಸಲು ಆಮ್ ಆದ್ಮಿ ಪಕ್ಷದ ಸರ್ಕಾರವು ಜಾಗರೂಕವಾಗಿದೆ ಎಂದು ದೆಹಲಿ ಸಚಿವ ಸೌರಭ್ ಭಾರದ್ವಾಜ್ ಹೇಳಿದ್ದಾರೆ.
ಯಮುನಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ದೆಹಲಿಯ ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ ಸಿಎಂ ಕೇಜ್ರಿವಾಲ್, ತಗ್ಗು ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.