ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ್ದ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಅಧಿಕೃತವಾಗಿ ಅಂಗೀಕರಿಸಿದ್ದಾರೆ. ಸಂವಿಧಾನದ ನಿಯಮಾವಳಿಗಳ ಅನ್ವಯ ಈ ರಾಜೀನಾಮೆಯನ್ನು ಸ್ವೀಕರಿಸಲಾಗಿದ್ದು, ಈ ಕುರಿತು ರಾಜಭವನದಿಂದ ಅಧಿಕೃತ ಆದೇಶ ಹೊರಬಿದ್ದಿದೆ.
ಹಂಗಾಮಿ ಸಿಎಂ ಆಗಿ ಸಿದ್ದರಾಮಯ್ಯ ಮುಂದುವರಿಕೆ:
ರಾಜ್ಯಪಾಲರು ಸಿದ್ದರಾಮಯ್ಯ ಅವರ ರಾಜೀನಾಮೆ ಪತ್ರವನ್ನು ಅಂಗೀಕರಿಸಿದ್ದರೂ, ರಾಜ್ಯದಲ್ಲಿ ಆಡಳಿತಾತ್ಮಕ ಶೂನ್ಯತೆ ಸೃಷ್ಟಿಯಾಗದಂತೆ ತಡೆಯಲು ಹೊಸ ಸರ್ಕಾರ ರಚನೆಯಾಗುವವರೆಗೆ, ಅಂದರೆ ಮುಂದಿನ 2 ರಿಂದ 3 ದಿನಗಳ ಕಾಲ ಸಿದ್ದರಾಮಯ್ಯ ಅವರೇ ಹಂಗಾಮಿ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ.
ರಾಜೀನಾಮೆ ಅಂಗೀಕಾರದ ಹಿನ್ನೆಲೆ:
ರಾಜ್ಯಪಾಲರು ಇಂದೋರ್ ಪ್ರವಾಸದಲ್ಲಿದ್ದ ಕಾರಣ, ಅವರ ಅನುಪಸ್ಥಿತಿಯಲ್ಲಿ ಗುರುವಾರ (ಮೇ 28) ಸಿಎಂ ಸಿದ್ದರಾಮಯ್ಯ ಅವರು ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗೆ ಹಸ್ತಾಂತರಿಸಿದ್ದರು. ಆದರೆ ಸಂವಿಧಾನದ ನಿಯಮಗಳ ಪ್ರಕಾರ ರಾಜ್ಯಪಾಲರು ಖುದ್ದಾಗಿ ಸಹಿ ಮಾಡಬೇಕಿದ್ದರಿಂದ ಪ್ರಕ್ರಿಯೆ ಬಾಕಿ ಇತ್ತು. ಗುರುವಾರ ತಡರಾತ್ರಿ ಇಂದೋರ್‌ನಿಂದ ಬೆಂಗಳೂರಿಗೆ ಆಗಮಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಇಂದು ಬೆಳಗ್ಗೆಯೇ ರಾಜೀನಾಮೆಗೆ ಅಂಕಿತ ಹಾಕಿದ್ದಾರೆ. ಇದರೊಂದಿಗೆ ಕರ್ನಾಟಕದಲ್ಲಿ ಹೊಸ ಮುಖ್ಯಮಂತ್ರಿ ಆಯ್ಕೆ ಹಾಗೂ ನೂತನ ಸರ್ಕಾರ ರಚನೆಯ ಪ್ರಕ್ರಿಯೆಗಳು ತೀವ್ರಗತಿಯಲ್ಲಿ ಚುರುಕುಗೊಂಡಿವೆ.



