ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜನ್ಮಸಿದ್ಧ ಪೌರತ್ವ ರದ್ದುಗೊಳಿಸುವ ತೀರ್ಮಾನ ಘೋಷಣೆ ಮಾಡಿದ್ದ ಬೆನ್ನಲ್ಲೇ ಅಮೆರಿಕದಲ್ಲಿ ತಮ್ಮ ಮಕ್ಕಳು ಹುಟ್ಟಲಿ ಎಂದು ಸಾಕಷ್ಟು ಗರ್ಭಿಣಿಯರು ಮೆಟರ್ನಿಟಿ ಕ್ಲಿನಿಕ್‌ಗಳತ್ತ ಧಾವಿಸುತ್ತಿದ್ದಾರೆ.
ಭಾರತೀಯ ಮೂಲದ ದಂಪತಿಗಳು ಕೂಡ ವೈದ್ಯರ ಅಪಾಂಯ್ಟ್‌ಮೆಂಟ್‌ಗಳನ್ನು ತೆಗೆದುಕೊಳ್ಳುತ್ತಿದ್ದು, ಫೆಬ್ರವರಿ 20ರ ಒಳಗಾಗಿ ಸಿಸೇರಿಯನ್ ಮೂಲಕ ಹೆರಿಗೆ ಮಾಡಿಸುವಂತೆ ದುಂಬಾಲು ಬಿದ್ದಿದ್ದಾರೆ.
ಭಾರತೀಯ ಮೂಲದ ಗೈನಕಾಲಾಜಿಸ್ಟ್ ಒಬ್ಬರು ಹೇಳುವ ಪ್ರಕಾರ, ದಂಪತಿಗಳಿಂದ ಕನಿಷ್ಠವೆಂದರೂ 20 ಇಂಥ ಕರೆ ಸ್ವೀಕರಿಸಿದ್ದಾಗಿ ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ವಹಿಸಿಕೊಂಡ ಬೆನ್ನಲ್ಲೇ ಹೊರಡಿಸಿರುವ ಆದೇಶದಲ್ಲಿ ಫೆ.20 ಹಾಗೂ 20ರ ನಂತರದಿಂದ ಅಮೆರಿಕದಲ್ಲಿ ಯಾವುದೇ ಜನ್ಮಸಿದ್ಧ ಪೌರತ್ವ ಇರೋದಿಲ್ಲ ಎಂದು ತಿಳಿಸಿದ್ದಾರೆ. ಫೆಬ್ರವರಿ 19 ರ ನಂತರ, ಅಮೆರಿಕದ ನಾಗರಿಕರಲ್ಲದ ದಂಪತಿಗಳಿಗೆ ಜನಿಸುವ ಮಕ್ಕಳು ನೈಸರ್ಗಿಕ ಅಮೆರಿಕನ್ ನಾಗರಿಕರಾಗಿರುವುದಿಲ್ಲ ಎನ್ನುವುದು ಈ ಆದೇಶವಾಗಿದೆ.
ಅಮೆರಿಕದಲ್ಲಿ ತಾತ್ಕಾಲಿಕ H-1B ಮತ್ತು L1 ವೀಸಾಗಳ ಮೇಲೆ ಕೆಲಸ ಮಾಡುತ್ತಿರುವ ಹತ್ತಾರು ಸಾವಿರ ಭಾರತೀಯರಿದ್ದಾರೆ. ಅವರು ಅಮೆರಿಕದಲ್ಲಿ ಶಾಶ್ವತ ನಿವಾಸವನ್ನು ನೀಡುವ ಗ್ರೀನ್ ಕಾರ್ಡ್‌ಗಳಿಗೂ ಕ್ಯೂನಲ್ಲಿದ್ದಾರೆ. ಅಮೆರಿಕದ ನಾಗರಿಕರು ಅಥವಾ ಗ್ರೀನ್ ಕಾರ್ಡ್ ಹೊಂದಿರುವವರು ಯಾರೂ ಇಲ್ಲದ ಪೋಷಕರಿಗೆ ಜನಿಸಿದ ಮಕ್ಕಳು ಹುಟ್ಟಿನಿಂದಲೇ ಅಮೆರಿಕದ ನಾಗರಿಕರಾಗುವುದಿಲ್ಲ. ಇದೇ ಕಾರಣಕ್ಕೆ ಫೆಬ್ರವರಿ 20 ಕ್ಕಿಂತ ಮೊದಲು ಸಿ-ಸೆಕ್ಷನ್ ಮೂಲಕ ಹೆರಿಗೆ ಮಾಡಿಸಿಕೊಳ್ಳಲು ಆತುರ ಹೆಚ್ಚುತ್ತಿದೆ.
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ನ್ಯೂಜೆರ್ಸಿಯ ಡಾ. ಎಸ್. ಡಿ. ರಾಮಾ ಅವರ ಹೆರಿಗೆ ಚಿಕಿತ್ಸಾಲಯವು ಎಂಟು ಮತ್ತು ಒಂಬತ್ತನೇ ತಿಂಗಳ ಗರ್ಭಿಣಿಯರಿಂದ ಭಾರೀ ಪ್ರಮಾಣದಲ್ಲಿ ಸಿ-ಸೆಕ್ಷನ್ ಹೆರಿಗೆಗಳ ಮನವಿಯನ್ನು ಸ್ವೀಕಾರ ಮಾಡಿವೆ. ಕೆಲವು ಕೇಸ್‌ಗಳಲ್ಲಿ ಅವರ ಪೂರ್ಣಾವಧಿಯ ಗರ್ಭಕ್ಕೆ ಇನ್ನೂ ಕೆಲುವು ತಿಂಗಳು ಬಾಕಿ ಉಳಿದಿವೆ.
ಏಳು ತಿಂಗಳ ಗರ್ಭಿಣಿಯೊಬ್ಬಳು ತನ್ನ ಪತಿಯೊಂದಿಗೆ ಅವಧಿಪೂರ್ವ ಹೆರಿಗೆಗೆ ನೋಂದಣಿ ಮಾಡಿಕೊಳ್ಳಲು ಬಂದಿದ್ದಳು. ಮಾರ್ಚ್‌ವರೆಗೆ ಅವಳಿಗೆ ಹೆರಿಗೆ ಆಗುವುದಿಲ್ಲ ಎಂದು ರಮಾ ತಿಳಿಸಿದ್ದಾರೆ. ಈ ದಟ್ಟಣೆಗೆ ಕಾರಣವೆಂದರೆ ಭಾರತೀಯರು ಅಮೆರಿಕದಲ್ಲಿ ಜನಿಸಿದ ತಮ್ಮ ಮಕ್ಕಳ ಮೇಲೆಯೂ ತಮ್ಮ ಪೌರತ್ವವನ್ನು ಪಣತೊಡುತ್ತಾರೆ. 21 ವರ್ಷ ತುಂಬಿದ ನಂತರ, ಈ ಅಮೆರಿಕನ್-ಇಂಡಿಯನ್ನರು ತಮ್ಮ ಪೋಷಕರಿಗೆ ಅಮೆರಿಕ ನಿವಾಸಕ್ಕೆ ಅರ್ಜಿ ಹಾಕಬಹುದು.
ಟೆಕ್ಸಾಸ್‌ನ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಎಸ್ ಜಿ ಮುಕ್ಕಳ, ಅವಧಿಪೂರ್ವ ಜನನದ ಅಪಾಯಗಳ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದರು. ಹೆರಿಗೆ ಸಾಧ್ಯವಾದರೂ ಸಹ, ಅವಧಿಪೂರ್ವ ಜನನವು ತಾಯಿ ಮತ್ತು ಮಗುವಿಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ ಎಂದು ನಾನು ದಂಪತಿಗಳಿಗೆ ಹೇಳಲು ಪ್ರಯತ್ನಿಸುತ್ತಿದ್ದೇನೆ. ತೊಡಕುಗಳಲ್ಲಿ ಅಭಿವೃದ್ಧಿಯಾಗದ ಶ್ವಾಸಕೋಶಗಳು, ಆಹಾರ ನೀಡುವ ಸಮಸ್ಯೆಗಳು, ಕಡಿಮೆ ಜನನ ತೂಕ, ನರವೈಜ್ಞಾನಿಕ ತೊಡಕುಗಳು ಮತ್ತು ಇನ್ನೂ ಹೆಚ್ಚಿನವು ಸೇರಿವೆ ಎಂದು ಅವರು ಹೇಳಿದ್ದಾರೆ.
ನಮ್ಮ ಮಗು ಇಲ್ಲಿ ಜನಿಸುತ್ತದೆ ಎಂದು ನಾವು ನಿರೀಕ್ಷಿಸುತ್ತಿದ್ದೆವು. ಆರು ವರ್ಷಗಳಿಂದ ನಮ್ಮ ಗ್ರೀನ್ ಕಾರ್ಡ್‌ಗಳಿಗಾಗಿ ನಾವು ಕಾಯುತ್ತಿದ್ದೇವೆ. ನಮ್ಮ ಕುಟುಂಬಕ್ಕೆ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಇದೊಂದೇ ಮಾರ್ಗವಾಗಿತ್ತು. ಅನಿಶ್ಚಿತತೆಯಿಂದ ನಾವು ಭಯಭೀತರಾಗಿದ್ದೇವೆ ಎಂದು ಮಾರ್ಚ್‌ನಲ್ಲಿ ಹೆರಿಗೆಯಾಗುವ ನಿರೀಕ್ಷೆಯಿರುವ ಪ್ರಿಯಾ ಎನ್ನುವ ಮಹಿಳೆ ತಿಳಿಸಿದ್ದಾರೆ.