ಹೊಸದಿಗಂತ ವರದಿ,ಹಾಸನ:
ಸರ್ಕಾರಿ ಜಮೀನಿನಲ್ಲಿ ತೋಟದ ಬೆಳೆಗಳನ್ನು ಬೆಳೆಯುತ್ತಿರುವ ಜಮೀನು ಗುತ್ತಿಗೆಗೆ ನೀಡಲು ಸಂಬಂಧಪಟ್ಟ ಬೆಳೆಗಾರರಿಂದ ಆನ್ ಲೈನ್ ಮೂಲಕ ಅರ್ಜಿ ಸ್ವೀಕರಿಸಲು ರಾಜ್ಯ ಸರ್ಕಾರ ನಿರ್ದೇಶಿಸಿದೆ. ಇದು ಬೆಳೆಗಾರರ ಬಹುದಿನಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಪಶ್ಚಿಮಘಟ್ಟ ಮೂಲ ನಿವಾಸಿಗಳ ಹೋರಾಟ ಸಮಿತಿಯ ಅಧ್ಯಕ್ಷ ಬಾಚಿಹಳ್ಳಿ ಪ್ರತಾಪ್‌ಗೌಡ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿದ್ದ ರೈತರಿಗೆ ಭೂಮಿಯನ್ನು ಗುತ್ತಿಗೆ ಆಧಾರದಲ್ಲಿ ನೀಡಲು ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ತೋಟದ ಬೆಳೆಗಳನ್ನು ಬೆಳೆಯುವ ಕೆಲ ಜಿಲ್ಲೆಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಇದರಿಂದ ಹಾಸನ ಜಿಲ್ಲೆಯ ಕಾಫಿ ಬೆಳೆಗಾರರಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿರಲಿಲ್ಲ ಈ ಹಿನ್ನೆಲೆಯಲ್ಲಿ ಬೆಳೆಗಾರ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಮನವಿ ಮಾಡಿದ್ದರು.
ಈ ಹಿನ್ನೆಲೆಯಲ್ಲಿ 1.01.2005ರ ಪೂರ್ವದಲ್ಲಿ ಸರ್ಕಾರಿ ಜಮೀನಿನಲ್ಲಿ ಪ್ಯಾಂಟೇಶನ್ ಬೆಳೆಗಳನ್ನು ಬೆಳೆಯುತ್ತಿರುವ ಜಮೀನುಗಳನ್ನು ಗುತ್ತಿಗೆಗೆ ನೀಡುವ ಬಗ್ಗೆ ಇದರೊಂದಿಗೆ ಲಗತ್ತಿಸಿರುವ ನಮೂನೆ-9ರಲ್ಲಿ ಸಂಬಂಧಪಟ್ಟ ಬೆಳೆಗಾರರಿಂದ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು 31.12.2024ರವರೆಗೆ ಕಾಲಾವಧಿಯನ್ನು ವಿಸ್ತರಿಸಲಾಗಿದೆ. ಈ ಅವಧಿಯಲ್ಲಿ ಅರ್ಜಿಗಳನ್ನು ತಹಶೀಲ್ದಾರರು ಸ್ವೀಕರಿಸತಕ್ಕದ್ದು ಎಂದು ಸರ್ಕಾರ ಆದೇಶಿಸಿದೆ.
ಆದ್ದರಿಂದ, ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಅವರು ಸರ್ಕಾರಿ ಜಮೀನುಗಳಲ್ಲಿನ ಅನಧಿಕೃತ ತೋಟದ ಬೆಳೆ ಬೆಳೆಯುತ್ತಿರುವ ಜಮೀನುಗಳನ್ನು ಗುತ್ತಿಗೆಗೆ ನೀಡುವ ಬಗ್ಗೆ ಬೆಳೆಗಾರರಿಗೆ ವ್ಯಾಪಕ ಪ್ರಚಾರ ಮಾಡಿ ಅರ್ಜಿ ಸಲ್ಲಿಸಲು ಜಾಗೃತಿ ಮೂಡಿಸುವುದಕ್ಕೆ ಕ್ರಮ ಕೈಗೊಳ್ಳಬೇಕಾಗಿದೆ. ಪ್ರಾಂಟೇಶನ್ ಭೂಮಿ ಗುತ್ತಿಗೆ ನೀಡುವ ಕುರಿತು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸ್ವೀಕರಿಸಲು ತಂತ್ರಾಂಶವನ್ನು ರಾಜ್ಯಾದ್ಯಂತ ಅಳವಡಿಸಲು ಕಂದಾಯ ಆಯುಕ್ತರು, ಕಂದಾಯ ಆಯುಕ್ತಾಲಯ ಕೂಡಲೇ ಕ್ರಮವಹಿಸತಕ್ಕದ್ದು ಮತ್ತು ಆಯುಕ್ತರು, ಭೂ ಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಇವರು ಸರ್ಕಾರಿ ಜಮೀನುಗಳಲ್ಲಿ ಬೆಳೆಯುತ್ತಿರುವ ಪ್ಲಾಂಟೇಶನ್ ಬೆಳೆಗಳ ಎಲ್ಲಾ ಜಮೀನುಗಳ ಕುರಿತು ಸರ್ವೆ ನಡೆಸಿ, ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಸರ್ಕಾರದ ಕಂದಾಯ ಇಲಾಖೆ ಭೂ ಮಂಜೂರಾತಿ-1ರ ಅಧೀನ ಕಾರ್ಯದರ್ಶಿ ಮಹಾಂತಯ್ಯ ಎಸ್.ಹೊಸಮಠ ಆದೇಶಿಸಿದ್ದಾರೆ.